SK Home Ad
Home ಕ್ರೀಡೆ ಗುಲ್ವೀರ್ –ಹರ್ಜಿಂದರ್ ಮಿಂಚು: ಭಾರತಕ್ಕೆ ಒಂದೇ ದಿನ ಎರಡು ಬೆಳ್ಳಿ

ಗುಲ್ವೀರ್ –ಹರ್ಜಿಂದರ್ ಮಿಂಚು: ಭಾರತಕ್ಕೆ ಒಂದೇ ದಿನ ಎರಡು ಬೆಳ್ಳಿ

0
55

ಗ್ಲಾಸ್ಗೊ: ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಎದುರಾಗಿದೆ. ಭಾರತದ ಉದಯೋನ್ಮುಖ ದೂರ ಓಟಗಾರ ಗುಲ್ವೀರ್ ಸಿಂಗ್ ಪುರುಷರ 10,000 ಮೀಟರ್ ಓಟದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಮಳೆ ಮತ್ತು ನೀರು ತುಂಬಿದ ಟ್ರ್ಯಾಕ್‌ನಂತಹ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಗುಲ್ವೀರ್ ಸಿಂಗ್ ಅಸಾಧಾರಣ ಧೈರ್ಯ ಹಾಗೂ ಸ್ಥಿರತೆಯಿಂದ ಓಡಿ 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ವಿಶೇಷ ಸಾಧನೆ ಮಾಡಿದ್ದಾರೆ.

ಕೊನೆಯವರೆಗೂ ಕೈಬಿಡದ ಹೋರಾಟ : ಗ್ಲಾಸ್ಗೊದಲ್ಲಿ ಮಂಗಳವಾರ ನಡೆದ ಈ ಸ್ಪರ್ಧೆಗೆ ಭಾರೀ ಮಳೆ ಸವಾಲಾಗಿ ಪರಿಣಮಿಸಿತ್ತು. ಟ್ರ್ಯಾಕ್‌ನಲ್ಲಿ ನೀರು ನಿಂತಿದ್ದರಿಂದ ಓಟಗಾರರಿಗೆ ವೇಗ ಕಾಯ್ದುಕೊಳ್ಳುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಗುಲ್ವೀರ್ ಆರಂಭದಿಂದಲೇ ಮುಂಚೂಣಿ ಗುಂಪಿನಲ್ಲಿ ಕಾಣಿಸಿಕೊಂಡರು.

ಓಟ ಮುಂದುವರಿದಂತೆ ಸ್ಪರ್ಧೆ ತೀವ್ರಗೊಂಡರೂ ಭಾರತೀಯ ಓಟಗಾರ ತಮ್ಮ ಲಯವನ್ನು ಕಾಪಾಡಿಕೊಂಡರು. ಅಂತಿಮ ಸುತ್ತುಗಳಲ್ಲೂ ಅವರು ಪೈಪೋಟಿ ಬಿಡದೆ ಮುನ್ನಡೆ ಸಾಧಿಸಲು ಪ್ರಯತ್ನಿಸಿದರು. ಕೊನೆಯ ಹಂತದಲ್ಲಿ ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಅವರೊಂದಿಗೆ ತೀವ್ರ ಪೈಪೋಟಿ ನಡೆಸಿದ ಗುಲ್ವೀರ್ ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಟ್ಟರು.

ಆಸ್ಟ್ರೇಲಿಯಾದ ಕೈ ರಾಬಿನ್ಸನ್ 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಗುಲ್ವೀರ್ ಕೇವಲ 0.85 ಸೆಕೆಂಡುಗಳ ಅಂತರದಲ್ಲಿ ಬೆಳ್ಳಿ ಪಡೆದರು. ಐಲ್ ಆಫ್ ಮ್ಯಾನ್‌ನ ಡೇವಿಡ್ ಮುಲ್ಲಾರ್ಕಿ 27 ನಿಮಿಷ 50.28 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕಕ್ಕೆ ಪಾತ್ರರಾದರು.

ಭಾರತೀಯ ಅಥ್ಲೆಟಿಕ್ಸ್‌ಗೆ ಹೊಸ ಮೈಲಿಗಲ್ಲು : ಗುಲ್ವೀರ್ ಅವರ ಈ ಸಾಧನೆಯ ವಿಶೇಷತೆ ಎಂದರೆ, ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 10,000 ಮೀಟರ್ ಓಟದಲ್ಲಿ ಭಾರತ ಇದುವರೆಗೆ ಪದಕ ಗೆದ್ದಿರಲಿಲ್ಲ. ಇದೀಗ ಗುಲ್ವೀರ್ ಬೆಳ್ಳಿ ಗೆಲ್ಲುವ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ. ಅವರ ಸಾಧನೆ ಭಾರತೀಯ ದೂರ ಓಟಕ್ಕೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಗುಲ್ವೀರ್ ಸಿಂಗ್ ಈಗಾಗಲೇ ಭಾರತದ ಪ್ರಮುಖ ದೂರ ಓಟಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಅವರು 10,000 ಮೀಟರ್‌ನಲ್ಲಿ 27:00.22 ರಾಷ್ಟ್ರೀಯ ದಾಖಲೆಯನ್ನೂ ಹೊಂದಿದ್ದಾರೆ. 2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5,000 ಮೀಟರ್ ಮತ್ತು 10,000 ಮೀಟರ್ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು.

ಹರ್ಜಿಂದರ್ ಕೌರ್‌ಗೂ ಬೆಳ್ಳಿ ಸಂಭ್ರಮ : ಗುಲ್ವೀರ್ ಸಿಂಗ್ ಅವರ ಐತಿಹಾಸಿಕ ಬೆಳ್ಳಿ ಸಾಧನೆಯ ಬೆನ್ನಲ್ಲೇ ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಕೂಡ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಹರ್ಜಿಂದರ್ ಒಟ್ಟು 227 ಕೆಜಿ ಭಾರ ಎತ್ತಿದರು. ಇದರಲ್ಲಿ ಸ್ನ್ಯಾಚ್‌ನಲ್ಲಿ 101 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 126 ಕೆಜಿ ಎತ್ತಿದರು. ಈ ಪ್ರದರ್ಶನದೊಂದಿಗೆ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಹರ್ಜಿಂದರ್ ಅವರಿಗೂ ಇದು ಮಹತ್ವದ ಸಾಧನೆಯಾಗಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, ಇದೀಗ ಗ್ಲಾಸ್ಗೊದಲ್ಲಿ ಬೆಳ್ಳಿಗೆ ಏರುವ ಮೂಲಕ ತಮ್ಮ ಪದಕದ ಬಣ್ಣವನ್ನು ಉತ್ತಮಪಡಿಸಿಕೊಂಡಿದ್ದಾರೆ.

ಒಂದೇ ದಿನ ಎರಡು ಬೆಳ್ಳಿ : ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ಅವರ ಬೆಳ್ಳಿ ಪದಕಗಳು ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಿವೆ. ವಿಶೇಷವಾಗಿ ಗುಲ್ವೀರ್ ಅವರ ಪದಕವು ಭಾರತೀಯ ಅಥ್ಲೆಟಿಕ್ಸ್‌ಗೆ ಐತಿಹಾಸಿಕ ಮೈಲಿಗಲ್ಲಾಗಿದ್ದು, ಹರ್ಜಿಂದರ್ ಅವರ ಬೆಳ್ಳಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಬಲವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

ಗುಲ್ವೀರ್ ಅವರ ಸಾಧನೆಯನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ಅವರನ್ನು ಅಭಿನಂದಿಸಿ, ಅವರ ಸಾಧನೆ ದೇಶದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ ಎಂದು ಹೇಳಿದ್ದಾರೆ.