SK Home Ad
Home ನಮ್ಮ ಜಿಲ್ಲೆ ಧಾರವಾಡ `ಹೀಗಿತ್ತು ಪಾಕ್ ಕಾರಾಗೃಹಗಳ ನರಕಯಾತನೆ, ಈಗ್ಲೂ ರಕ್ತ ಕುದಿಯುತ್ತೆ’

`ಹೀಗಿತ್ತು ಪಾಕ್ ಕಾರಾಗೃಹಗಳ ನರಕಯಾತನೆ, ಈಗ್ಲೂ ರಕ್ತ ಕುದಿಯುತ್ತೆ’

0
3

ಡಾ. ವಿಶ್ವನಾಥ ಕೋಟಿ
ಧಾರವಾಡ: 1965ರಲ್ಲಿ ನಡೆದ ಭಾರತ-ಪಾಕ್ ಯುದ್ಧದಲ್ಲಿ ಯುದ್ಧ ಕೈದಿಯಾಗಿ ಪಾಕಿಸ್ತಾನದ ಕಾರಾಗೃಹವಾಸ ಅನುಭವಿಸಿ ಬಂದಿರುವ 87ರ ಹರೆಯದ ಮಲ್ಲೇಶಪ್ಪ ಗೌಡನಾಯಕ್ ಯುದ್ಧ, ಪಾಕ್‌ಜೈಲಿನಲ್ಲಿನ ಕರಾಳ ಸ್ಥಿತಿಯನ್ನು ಹಂಚಿಕೊಂಡರು.

ಕಾರ್ಗಿಲ್ ವಿಜಯ್ ದಿವಸ್‌ದ ಅಂಗವಾಗಿ ಧಾರವಾಡದ ಕಾರ್ಗಿಲ್ ಸ್ತೂಪಕ್ಕೆ ಬಂದು ಕಾರ್ಗಿಲ್ ಹುತಾತ್ಮರಿಗೆ ಗೌರವ ಸಲ್ಲಿಸಿದ ನಂತರ ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದರು. ಪಾಕ್ ಯುದ್ಧದ ದಿನಗಳನ್ನು ಮಲ್ಲೇಶಪ್ಪ ಹಂಚಿಕೊಂಡರು.

ಬೆಳಗಾವಿಯ 19-ಮರಾಠಾ ಲೈಟ್ ಇನ್‌ಫೆಂಟ್ರಿಯಲ್ಲಿ ನಾಯಕ್ ಆಗಿದ್ದ ಮಲ್ಲೇಶಪ್ಪ 1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಹಾಗೂ 1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಹೋರಾಡಿದ ವೀರ ಯೋಧ. 1965ರ ಯುದ್ಧದಲ್ಲಿ ನಾನು ಯುದ್ಧ ಕೈದಿಯಾಗಿ ಅಲ್ಲಿನ ಕಾರಾಗೃಹದಲ್ಲಿದ್ದಾಗ ಅನುಭವಿಸಿದ್ದು ನರಕಯಾತನೆ. ಅಮಾನವೀಯವಾಗಿ ನಮ್ಮನ್ನು ನಡೆಸಿಕೊಂಡರು. ಆದರೆ, ಅದೇ ಯುದ್ಧದಲ್ಲಿ ಸೆರೆಸಿಕ್ಕ ಪಾಕ್ ಸೈನಿಕರಿಗೆ ನಮ್ಮ ದೇಶದ ಕಾರಾಗೃಹಗಳಲ್ಲಿ ಯೋಗ್ಯವಾದ ಭೋಜನ ನೀಡಲಾಗುತ್ತಿತ್ತು.

ಭಾರತೀಯ ಕೈದಿಗಳಿಗೆ ಹಾಗೂ ಪಾಕ್ ಕೈದಿಗಳಿಗೆ ಭೇದ ಮಾಡುತ್ತಿರಲಿಲ್ಲ. ಮಾನವೀಯತೆಯಿಂದ ನೋಡಿಕೊಳ್ಳಲಾಗುತ್ತಿತ್ತು. 6 ತಿಂಗಳು ಪಾಕಿಸ್ತಾನದ ಕಾರಾಗೃಹಗಳಲ್ಲಿನ ವಾಸವನ್ನು ಸ್ಮರಿಸಿಕೊಂಡರೆ ಈಗಲೂ ರೋಷ ಉಕ್ಕುತ್ತದೆ ಎಂದು ಧಾರವಾಡದ 87ರ ಹರೆಯದ ಮಲ್ಲೇಶಪ್ಪ ಗೌಡನಾಯಕ್ ಹೇಳುವಾಗ ಅವರ ಧ್ವನಿಯಲ್ಲಿ ಆಕ್ರೋಶ ಕಂಡಿತು.

1965ರ ಸೆಪ್ಟೆಂಬರ್ 20ರಂದು ಪಾಕ್ ವಿರುದ್ಧದ ಯುದ್ಧದಲ್ಲಿ ಎಡ ಮುಂಗೈ ಹಾಗೂ ತೊಡೆಗೆ ಗುಂಡು ತಾಗಿ ಬಿದ್ದಾಗ ಓಡಿ ಬಂದ ಪಾಕ್ ಸೈನಿಕ ರೈಫಲ್‌ನಿಂದ ಬಲ ಭುಜಕ್ಕೆ ಹೊಡೆದ. ಹೊಡೆತಕ್ಕೆ ಮೂಳೆ ಮುರಿದು ಭುಜ ಬಾತುಕೊಂಡಿತು.

ಜೀವಂತವಾಗಿರುವುದನ್ನು ದೃಢಪಡಿಸಿಕೊಂಡ ಪಾಕ್ ಸೈನಿಕರು ಇವರನ್ನು ಮೊದಲು ಲಾಹೋರ್ ಜೈಲಿಗೆ ಕರೆದೊಯ್ದರು. ಯುದ್ಧ ಕೈದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಅಲ್ಲಿಂದ ರಾವಲ್ಪಿಂಡಿ ಜೈಲಿಗೆ, ಅಲ್ಲಿಂದ ಪೇಶಾವರ್ ಜೈಲಿಗೆ ಅಲ್ಲದೇ ಅಫಘಾನಿಸ್ತಾನ ಗಡಿಯ ಕಾಡಿನಲ್ಲಿರುವ ಕ್ವೆಟ್ಟಾ ಜೈಲಿಗೆ ಕರೆದೊಯ್ಯಲಾಯಿತು.

ಫೋಟೊಕ್ಕೆ ಹಾರ ಹಾಕಿದ್ದರು: ಇತ್ತ ಮನೆಯವರು ಸೈನ್ಯದ ಕಚೇರಿಯಲ್ಲಿ ವಿಚಾರಿಸಿದಾಗ “ಮಿಸ್ಸಿಂಗ್’ ಎಂದು ಪತ್ರ ನೀಡಿದರು. ನಾನು ಜೀವಂತವಾಗಿಲ್ಲ ಎಂದು ತಿಳಿದು ಮನೆಯಲ್ಲಿ ನನ್ನ ಫೋಟೊಕ್ಕೆ ಹಾರ ಹಾಕಿ ವಿಧಿ ವಿಧಾನ ಮಾಡಿದ್ದರು. ಆದರೆ ತಾಷ್ಕೆಂಟ್ ಶಾಂತಿ ಒಪ್ಪಂದಿಂದಾಗಿ 1966ರ ಫೆಬ್ರವರಿ 22ರಂದು ನಾನು ಶಿಕ್ಷೆ ಮುಗಿಸಿ ಉತ್ತರ ಪ್ರದೇಶದ ಮಥುರಾ ಟೆಂಟ್‌ಗೆ ಬಂದು ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದೆ. ಯುದ್ಧ ಗಾಯಾಳುವಾಗಿದ್ದರಿಂದ ನನಗೆ ಸೇವಾ ನಿವೃತ್ತಿ ನೀಡಲಾಯಿತು. ಈವರೆಗೆ ಸರಕಾರ ಗೌರವ ನೀಡಿದೆ. ರಕ್ಷಣಾ ಪದಕ ನೀಡಿ ಸನ್ಮಾನಿಸಿದೆ. ಪಿಂಚಣಿ ನೀಡುತ್ತಿದೆ. ನನ್ನ ದೇಶದ ರಕ್ಷಣೆಗಾಗಿ ನಡೆದ 2 ಯುದ್ಧಗಳಲ್ಲಿ ಪಾಲ್ಗೊಂಡ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಮಲ್ಲೇಶಪ್ಪ ಸಂತಸ ವ್ಯಕ್ತಪಡಿಸಿದರು.

ಇದು ಪಾಕ್ ಜೈಲಿನ ಮೆನು: ಪಾಕಿಸ್ತಾನದ ಜೈಲಿನಲ್ಲಿ ಬೆಳಗ್ಗೆ 2 ದೊಡ್ಡ ಚಮಚ ಚಹಾ, ಮಧ್ಯಾಹ್ನ 12 ಗಂಟೆಗೆ ಅರೆಬರೆ ಬೆಂದ 2 ಚಪಾತಿ, ರುಚಿ ಇಲ್ಲದ ಗಜ್ಜರಿ ಪಲ್ಯ, ಸಂಜೆ 6 ಗಂಟೆಗೆ 2 ಚಪಾತಿ ಹಾಗೂ ಸೆಲಗಾಮ್ ಗಡ್ಡಿಯ ಪಲ್ಲೆ ನೀಡುತ್ತಿದ್ದರು. ಊಟ ರುಚಿಸುತ್ತಿರಲಿಲ್ಲ. ಆದರೂ ಬದುಕುವುದಕ್ಕಾಗಿ ತಿನ್ನುವುದು ಅನಿವಾರ್ಯವಾಗಿತ್ತು.

ಕರ್ನಾಟಕದಿಂದ ನಾನು, ವಿಜಯಪುರ ಜಿಲ್ಲೆಯ ಅರ್ಜುನ ಕೋಳಿ ಹಾಗೂ ಕೊಡಗಿನ ಪೊನ್ನಪ್ಪ ಕಾರಾಗೃಹದಲ್ಲಿದ್ದೆವು. ನಮ್ಮನ್ನು ಜೀವಂತವಾಗಿ ಕಳಿಸುವುದಿಲ್ಲ ಎಂಬುದು ಅವರ ವರ್ತನೆಯಿಂದ ಖಾತ್ರಿಯಾಗಿತ್ತು. ನನ್ನ ಕಣ್ಣ ಮುಂದೆಯೇ ರೈಫಲ್‌ನಿಂದ ಒಬ್ಬ ಯೋಧನ ಮುಖಕ್ಕೆ ಹೊಡೆದಾಗ ಆತನ ಗಲ್ಲ ಹರಿದು ರಕ್ತ ಸುರಿಯಿತು. ಹೊಲಿಗೆ ಹಾಕಿ ಕಳಿಸಲಾಯಿತು. ದೇಹದಲ್ಲಿ 2 ಗುಂಡುಗಳನ್ನಿಟ್ಟುಕೊಂಡ ನೋವು ಒಂದೆಡೆಯಾದರೆ ಭುಜದ ಮೂಳೆ ಮುರಿದಿದ್ದರಿಂದ ರಾತ್ರಿ ನಿದ್ರೆ ಮಾಡಲು ಆಗುತ್ತಿರಲಿಲ್ಲ. ನನ್ನ ಸಿಟ್ಟು ದವಡೆಗೆ ಮೂಲವಾಗಿತ್ತು ಎಂದು ಮಲ್ಲೇಶಪ್ಪ ಗೌಡನಾಯಕ್ ಪಾಕ್ ಜೈಲಿನ ಸ್ಥಿತಿ ತೋಡಿಕೊಂಡರು.