ಶಿಮ್ಲಾ: ಹಿಮಾಚಲ ಪ್ರದೇಶದ ಲಹೌಲ್-ಸ್ಪಿಟಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಟಾಟಾ ಸುಮೋ (ಕ್ಯಾಬ್) ವಾಹನದ ಮೇಲೆ ಬೃಹತ್ ಬಂಡೆಗಳು ಹಾಗೂ ಮಣ್ಣು ಕುಸಿದು ಬಿದ್ದ ಪರಿಣಾಮ 13 ಜನರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಲಹೌಲ್-ಸ್ಪಿಟಿ ಜಿಲ್ಲೆಯ ಉದಯಪುರ–ಕಿಲ್ಲರ್ ಮಾರ್ಗದ ಕಹು-ಡು ನಾಲಾ (Kahu-Du Nallah) ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಕುಲು ಪ್ರದೇಶದಿಂದ ಪಂಗಿ ಕಣಿವೆಯತ್ತ ಪ್ರಯಾಣಿಸುತ್ತಿದ್ದ ಟಾಟಾ ಸುಮೋ ಮೇಲೆ ಬೆಟ್ಟದ ದೊಡ್ಡ ಭಾಗವೇ ಇದ್ದಕ್ಕಿದ್ದಂತೆ ಕುಸಿದಿದೆ. ಟನ್‌ಗಟ್ಟಲೆ ಮಣ್ಣು, ಬಂಡೆಗಳು ಮತ್ತು ಅವಶೇಷಗಳು ನೇರವಾಗಿ ವಾಹನದ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತ ಸಂಭವಿಸಿದ ವೇಳೆ ವಾಹನದಲ್ಲಿದ್ದ ಎಲ್ಲ 13 ಜನರು ಸಾವನ್ನಪ್ಪಿದ್ದಾರೆ ಎಂದು ಭರ್ಮೋರ್-ಪಂಗಿ ಕ್ಷೇತ್ರದ ಶಾಸಕ ಡಾ. ಜನಕ್ ರಾಜ್ ದೃಢಪಡಿಸಿದ್ದಾರೆ. ಮೃತರಲ್ಲಿ ವಾಹನ ಚಾಲಕ ಬೀರ್ ಸಿಂಗ್ ಕೂಡ ಸೇರಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ಸೇರಿದಂತೆ ಯಂತ್ರೋಪಕರಣಗಳ ನೆರವಿನಿಂದ ಬಂಡೆ ಹಾಗೂ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನವನ್ನು ಹೊರತೆಗೆದ ಬಳಿಕ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಮತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜುಲೈ 23ರಿಂದ 27ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಯೆಲ್ಲೋ ಅಲರ್ಟ್ ಘೋಷಿಸಿ ಮುನ್ನೆಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ನಡುವೆಯೇ ಈ ದುರಂತ ಸಂಭವಿಸಿದೆ.





















