SK Home Ad
Home ಸುದ್ದಿ ರಾಜ್ಯ ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ: ಕರ್ಮವೀರ ಕಥಾಸ್ಪರ್ಧೆಗೆ ಆಹ್ವಾನ

ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ: ಕರ್ಮವೀರ ಕಥಾಸ್ಪರ್ಧೆಗೆ ಆಹ್ವಾನ

0
80

ಬೆಂಗಳೂರು: ಕನ್ನಡದ ಪ್ರತಿಷ್ಠಿತ ವಾರಪತ್ರಿಕೆ ‘ಕರ್ಮವೀರ’ ತನ್ನ ದೀಪಾವಳಿ ಕಥಾಸ್ಪರ್ಧೆ-2026ಕ್ಕೆ ಸಾಹಿತ್ಯಾಸಕ್ತರು ಹಾಗೂ ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹8,000, ದ್ವಿತೀಯ ಬಹುಮಾನವಾಗಿ ₹5,000 ಹಾಗೂ ತೃತೀಯ ಬಹುಮಾನವಾಗಿ ₹3,000 ನೀಡಲಾಗುತ್ತದೆ.

18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಸಿದ್ಧ ಲೇಖಕರು, ಹೊಸಬರು ಹಾಗೂ ಹವ್ಯಾಸಿ ಬರಹಗಾರರು ಸೇರಿದಂತೆ ಎಲ್ಲರಿಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಲೋಕ ಶಿಕ್ಷಣ ಟ್ರಸ್ಟ್‌ನ ಸಿಬ್ಬಂದಿ ಹಾಗೂ ಅವರ ನಿಕಟ ಸಂಬಂಧಿಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಕಥೆಗೆ ಇರಬೇಕಾದ ಅರ್ಹತೆ : ಸ್ಪರ್ಧೆಗೆ ಕಳುಹಿಸುವ ಕಥೆ ಸ್ಪರ್ಧಿಯ ಸ್ವಂತ ಮತ್ತು ಅಪ್ರಕಟಿತ ರಚನೆಯಾಗಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ. ಒಬ್ಬರು ಕೇವಲ ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಸ್ಪರ್ಧೆಯ ಫಲಿತಾಂಶ ಪ್ರಕಟವಾಗುವವರೆಗೆ ಅದೇ ಕಥೆಯನ್ನು ಬೇರೆ ಯಾವುದೇ ಪತ್ರಿಕೆ ಅಥವಾ ಸ್ಪರ್ಧೆಗೆ ಕಳುಹಿಸಬಾರದು ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ಚಿತ್ರಕಥೆ, ಕಿರುನಾಟಕ ಅಥವಾ ಇತರ ಸಾಹಿತ್ಯ ಪ್ರಕಾರಗಳ ಬದಲು ಕಥೆಯು ಉತ್ತಮ ಕಥಾವಸ್ತು, ಪರಿಣಾಮಕಾರಿ ಭಾಷೆ, ಶೈಲಿ ಹಾಗೂ ತಂತ್ರವನ್ನು ಒಳಗೊಂಡಿರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಅವಕಾಶ : ಸಾಮಾಜಿಕ, ಆರ್ಥಿಕ, ರಾಜಕೀಯ, ಪತ್ತೇದಾರಿ, ಥ್ರಿಲ್ಲರ್, ಹಾರರ್, ವಿಜ್ಞಾನ ಕಥೆ (Science Fiction) ಸೇರಿದಂತೆ ಎಲ್ಲ ರೀತಿಯ ಸಭ್ಯ ಸಾಹಿತ್ಯಕ್ಕೂ ಈ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗಿದೆ.

ಪದಮಿತಿ ಎಷ್ಟು? : ಸ್ಪರ್ಧೆಗೆ ಸಲ್ಲಿಸುವ ಕಥೆಯು ಕನಿಷ್ಠ 2,500 ಪದಗಳು ಮತ್ತು ಗರಿಷ್ಠ 5,000 ಪದಗಳ ಮಿತಿಯಲ್ಲಿರಬೇಕು. ಇದಕ್ಕಿಂತ ಕಡಿಮೆ ಇರುವ ಕಿರುಕಥೆಗಳಿಗೆ ಅವಕಾಶವಿಲ್ಲ.

ಕಥೆ ಸಲ್ಲಿಸುವ ವಿಧಾನ : ಕಥೆಯನ್ನು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿದ ಫೈಲ್‌ನ್ನು ಇ-ಮೇಲ್ ಮೂಲಕ ಅಥವಾ ಪ್ರಿಂಟ್ ಪ್ರತಿಯನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಬಹುದು. ಕೈಬರಹದ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಕಥೆಯ ಜೊತೆಗೆ ಲೇಖಕರ ಭಾವಚಿತ್ರ, ಸಂಪೂರ್ಣ ವಿಳಾಸ, ಸಂಕ್ಷಿಪ್ತ ಪರಿಚಯ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಕಡ್ಡಾಯವಾಗಿ ಸೇರಿಸಬೇಕು.

ಕಥೆ ಕಳುಹಿಸಲು ಕೊನೆಯ ದಿನ : ಸ್ಪರ್ಧೆಗೆ ಕಥೆಗಳನ್ನು 2026ರ ಆಗಸ್ಟ್ 16ರೊಳಗೆ ತಲುಪುವಂತೆ ಕಳುಹಿಸಬೇಕು. ನಿಗದಿತ ದಿನಾಂಕದ ನಂತರ ಬರುವ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಹುಮಾನಿತ ಕಥೆಗಳ ಹಕ್ಕು : ಬಹುಮಾನಿತ ಕಥೆಗಳನ್ನು ಎಲ್ಲಿ, ಎಷ್ಟು ಬಾರಿ ಹಾಗೂ ಯಾವ ಸ್ವರೂಪದಲ್ಲಾದರೂ ಪ್ರಕಟಿಸುವ ಹಕ್ಕು ‘ಕರ್ಮವೀರ’ ವಾರಪತ್ರಿಕೆಗೆ ಮೀಸಲಾಗಿರುತ್ತದೆ. ಸಂಪಾದಕರ ತೀರ್ಮಾನವೇ ಅಂತಿಮವಾಗಿದ್ದು, ಸೂಕ್ತ ಗುಣಮಟ್ಟದ ಕಥೆಗಳು ದೊರೆಯದಿದ್ದರೆ ಯಾವುದೇ ಬಹುಮಾನವನ್ನು ನೀಡದಿರಲು ಸಹ ಅವಕಾಶವಿದೆ ಎಂದು ಸ್ಪರ್ಧೆಯ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಕಥೆ ಕಳುಹಿಸಬೇಕಾದ ವಿಳಾಸ

ಸಂಪಾದಕರು

ಕರ್ಮವೀರ ದೀಪಾವಳಿ ಕಥಾಸ್ಪರ್ಧೆ-2026

‘ಕರ್ಮವೀರ’ ವಾರಪತ್ರಿಕೆ,

ನಂ. 2, ದಿವಾಕರ ಭವನ,

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ,

ಬೆಂಗಳೂರು – 560025

ಇ-ಮೇಲ್: karmaveera@yahoo.com