SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತನ ಬರ್ಬರ ಹತ್ಯೆ

ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತನ ಬರ್ಬರ ಹತ್ಯೆ

0
75

ಬಳ್ಳಾರಿ: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ದುಃಖದ ಛಾಯೆ ಆವರಿಸಿದ ಘಟನೆ ನಗರದ 29ನೇ ವಾರ್ಡ್‌ನ ಬಟ್ಟಿ ಏರಿಯಾ ಸಮತಾ ನಗರದಲ್ಲಿ ನಡೆದಿದೆ.

ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಪ್ರಕರಣ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.


ಮೃತರನ್ನು ನಬಿ ರಸೂಲ್ ಎಂದು ಗುರುತಿಸಲಾಗಿದೆ. ಅವರು ಬೋಟಿ ಮಾರ್ಕೆಟ್‌ನಲ್ಲಿ ಕೆಲಸ ಮಾಡುವುದರ ಜೊತೆಗೆ ಗಾರೆ ಕೆಲಸವನ್ನೂ ಮಾಡುತ್ತಿದ್ದರು.

ಸುಮಾರು 15 ದಿನಗಳ ಹಿಂದೆ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು ನಬಿ ರಸೂಲ್ ಪ್ರೀತಿಸಿ ಕರೆದುಕೊಂಡು ಹೋಗಿದ್ದರು. ಬಳಿಕ ಉಭಯ ಕುಟುಂಬಗಳ ಒಪ್ಪಿಗೆಯೊಂದಿಗೆ ಗುರುವಾರ ಮದುವೆ ಹಾಗೂ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಗಿತ್ತು.

ರಿಸೆಪ್ಷನ್ ಮುಗಿದ ಬಳಿಕ ರಾತ್ರಿ ಸುಮಾರು 11.30ರ ವೇಳೆಗೆ ಗೆಳೆಯನಿಂದ ಕರೆ ಬಂದಿದೆ ಎಂದು ಹೇಳಿ ನಬಿ ರಸೂಲ್ ಮನೆಯಿಂದ ಹೊರಟಿದ್ದರು. ಆದರೆ ಅವರು ಮನೆಗೆ ಮರಳಲಿಲ್ಲ. ಬಳಿಕ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ, ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ರಕ್ತದ ಮಡುವಿನಲ್ಲಿ ಅವರ ಶವ ಪತ್ತೆಯಾಯಿತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಡಿವೈಎಸ್‌ಪಿ ಸ್ವನದಾಳ ಹಾಗೂ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಮಹಜರು ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಆರಂಭಿಸಿದ್ದಾರೆ.

ಹತ್ಯೆಗೆ ನಿಖರ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ. ಪ್ರೇಮ ವಿವಾಹದ ಹಿನ್ನೆಲೆ, ವೈಯಕ್ತಿಕ ದ್ವೇಷ ಅಥವಾ ಇತರೆ ಯಾವುದೇ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೆದ ಈ ಹತ್ಯೆ ಪ್ರಕರಣ ಬಳ್ಳಾರಿ ನಗರದಲ್ಲಿ ಭಾರೀ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.