ಗದಗ: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ರಿಪೇರಿ 24 ತಿಂಗಳು ತಗಲಿದರೆ, ಸಿಎಂ ಆಗಿ ಡಿ.ಕೆ. ಶಿವಕುಮಾರ ಅಧಿಕಾರವಹಿಸಿಕೊಂಡ 24 ಗಂಟೆಯಲ್ಲೇ ಬಿಡದಿ ಫಲವತ್ತಾದ ಜಮೀನು ಕಿತ್ತುಕೊಳ್ಳುವ ದುಸ್ಸಾಹಸ ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಂದ ಬಲವಂತವಾಗಿ ಜಮೀನು ಕಸಿಯುವುದಿಲ್ಲವೆಂದು ಸಿಎಂ ಹೇಳುತ್ತಲೇ, ರೈತರ ಮನೆಗೆ ರಾತ್ರಿ ಗೂಂಡಾಗಳು ನುಗ್ಗಿ ಜಮೀನನ್ನು ಬಿಟ್ಟುಕೊಡುವಂತೆ ಧಮ್ಕಿ ಹಾಕುತ್ತಿರುವುದಾಗಿ ರೈತರು ಹೇಳುತ್ತಿದ್ದಾರೆ. ಈ ಮಧ್ಯೆ ರೈತರು ಕೊಟ್ಟರೆ ಮಾತ್ರ ಜಮೀನು ಪಡೆಯುವುದಾಗಿ ಹೇಳಿಕೆ ನೀಡುವ ಮೂಲಕ ಸಿಎಂ ಕಪಟ ನಾಟಕ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಆದಮೇಲೂ ಡಿಕೆಶಿ ರಿಯಲ್ ಎಸ್ಟೇಟ್ ಧೋರಣೆಯಿಂದ ಹೊರಬಂದಿಲ್ಲ. ಬಿಜೆಪಿ ಟೌನ್‌ಶಿಪ್ ನಿರ್ಮಾಣವನ್ನು ವಿರೋಧಿಸುವುದಿಲ್ಲ. ಶೇ. 70 ರೈತರು ಒಪ್ಪಿದಲ್ಲಿ ಮಾತ್ರವೇ ಟೌನ್‌ಶಿಪ್ ಮಾಡಬಹುದೆಂದು ಹೇಳಿದರು.
ಸಿಎಂ ಡಿ.ಕೆ. ಶಿವಕುಮಾರ ಅವರ ಬಹುತೇಕ ಬಂಧು ಬಳಗವೇ ಬಿಡದಿಯಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಸಣ್ಣ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆಂದೂ ಹೇಳುತ್ತಿದ್ದಾರೆ. ಡಿಕೆಶಿ ಅವರೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡ್ಬೇಡಿ ಎಂದು ಕೈಮುಗಿದು ಆಗ್ರಹಿಸಿದರು. ಕುಮಾರಸ್ವಾಮಿ ಕಾಲದಲ್ಲಿ ಆರಂಭವಾಗಿದೆ ಎಂಬ ನೆಪವೊಡ್ಡಿ ಭೂಮಿ ಕಸಿಯಬೇಡಿ. ಹೀಗೆ ಮಾಡಿದಲ್ಲಿ ರೈತರ ಶಾಪಕ್ಕೆ ಸರ್ಕಾರ ಬಲಿಯಾಗುತ್ತದೆಯೆಂದು ಎಚ್ಚರಿಕೆ ನೀಡಿದರು.






















