SK Home Ad
Home ನಮ್ಮ ಜಿಲ್ಲೆ ಧಾರವಾಡ ವೈದ್ಯ ದಂಪತಿಯ ಕೌಟುಂಬಿಕ ಕಲಹ: ಪತ್ನಿಯಿಂದಲೇ ಪತಿ ಮರ್ಡರ್

ವೈದ್ಯ ದಂಪತಿಯ ಕೌಟುಂಬಿಕ ಕಲಹ: ಪತ್ನಿಯಿಂದಲೇ ಪತಿ ಮರ್ಡರ್

0
11

ಧಾರವಾಡ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿಯ ಬಾರಾಕೋಟ್ರಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ಘಟನೆಯಲ್ಲಿ 8 ವರ್ಷದ ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ. ಕಿರಣ ಹೊನ್ನಣ್ಣವರ (45) ಕೊಲೆಯಾದವರು. 8 ವರ್ಷದ ನೇಹಿತ್ ಚಾಕು ಇರಿತದಿಂದ ಗಾಯಗೊಂಡಿದ್ದಾನೆ. ಈ ಇಬ್ಬರ ಮೇಲೆ ಪತ್ನಿ ಡಾ. ಪ್ರಿಯಾಂಕಾ ಹಲ್ಲೆ ಮಾಡಿದ್ದಾಳೆ ಎಂದು ಡಾ. ಕಿರಣ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಮಂಗಳವಾರ ರಾತ್ರಿಯಿಂದಲೇ ಡಾ. ಕಿರಣ ಅವರ ಫೋನ್‌ಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಕರೆ ಮಾಡಿದಾಗ, ಪತ್ನಿ ಪ್ರಿಯಾಂಕಾ ಕರೆ ಸ್ವೀಕರಿಸಿ ತನ್ನ ಪತಿ ಹೊರಹೋಗಿದ್ದಾರೆ, ಕೆಲಸದ ಮೇಲೆ ಇದ್ದಾರೆ ಎಂದೆಲ್ಲ ಹೇಳಿದ್ದಾಳೆ. ಇದಾದ ಬಳಿಕ ಬುಧವಾರ ಬೆಳಗ್ಗೆ ಕರೆ ಮಾಡಿದರೂ ಇದೇ ರೀತಿಯ ಉತ್ತರ ಕೇಳಿಬಂದಿದೆ. ಅಕ್ಕಪಕ್ಕದ ಮನೆಯವರು ವಿಚಾರಿಸಿದಾಗಲೂ ಮನೆಯಲ್ಲಿ ತಾನೊಬ್ಬಳೆ ಇರುವುದಾಗಿ ತಿಳಿಸಿದ್ದಾಳೆ.

ಆದರೆ, ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದ ಡಾ. ಕಿರಣ ಎಲ್ಲಿಯೂ ಹೊರಹೋಗಿಲ್ಲ ಎನ್ನುವುದು ಸ್ಥಳೀಯರ ಮಾತು. ರಾತ್ರಿಯೇ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಪತ್ನಿಯೇ ಚಾಕು ಇರಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಬುದ್ಧಿಮಾಂದ್ಯವಿದ್ದ 8 ವರ್ಷದ ಮಗು ನೇಹಿತ್ ಮೇಲೂ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಪತಿ ಒಂದು ಬೆಡ್‌ರೂಮ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದರೆ, ಇನ್ನೊಂದು ಬೆಡ್‌ರೂಮ್‌ನಲ್ಲಿ ಮಗು ನೇಹಿತ್ ಒದ್ದಾಡಿದ್ದಾನೆ. ನಿರಂತರ ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಡಾ. ಕಿರಣ ಅವರ ಕುಟುಂಬಸ್ಥರು ಊರಿನಿಂದ ಬಂದು ವಿಚಾರಿಸಿದಾಗ ಡಾ. ಕಿರಣ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮಗ ನೇಹಿತ್‌ನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಠಾಣೆ ಪೊಲೀಸರು ಪ್ರಿಯಾಂಕಾಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ಡಾ. ಕಿರಣ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.