ಭುವನೇಶ್ವರ್: ಪುರಿ ಜಗನ್ನಾಥನ ವಾರ್ಷಿಕ ರಥಯಾತ್ರೆ ಅಂಗವಾಗಿ ಈ ವರ್ಷವೂ ರಿಲಯನ್ಸ್ ಫೌಂಡೇಷನ್ ತನ್ನ ಸೇವಾ ಕಾರ್ಯಗಳನ್ನು ವಿಸ್ತೃತವಾಗಿ ಕೈಗೊಂಡಿದ್ದು, ಸ್ಥಳೀಯ ಆಡಳಿತದ ಸಹಯೋಗದಲ್ಲಿ ʻಸಮಗ್ರ ಪುರಿ ರಥಯಾತ್ರೆ ಸೇವಾ–2026ʼ ಉಪಕ್ರಮವನ್ನು ಜಾರಿಗೊಳಿಸಿದೆ. ಈ ಮೂಲಕ ಲಕ್ಷಾಂತರ ಭಕ್ತರು, ಮುಂಚೂಣಿ ಸಿಬ್ಬಂದಿ ಹಾಗೂ ನಾಗರಿಕ ಸೇವಾ ಅಧಿಕಾರಿಗಳಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ.
ಜುಲೈ 15ರಿಂದ 27ರವರೆಗೆ ನಡೆಯುವ ಸೇವಾ ಕಾರ್ಯಕ್ರಮದಡಿ ಯಾತ್ರಿಕರಿಗೆ ತಾಜಾವಾಗಿ ತಯಾರಿಸಿದ ಸಾತ್ವಿಕ ಆಹಾರ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ. ಪುರಿಯ ಗ್ರ್ಯಾಂಡ್ ರೋಡ್‌ನ ಭೋಲಾನಾಥ್ ಪ್ರೌಢಶಾಲೆಯಲ್ಲಿ ಕೇಂದ್ರ ಅಡುಗೆಮನೆ (ಸೆಂಟ್ರಲ್ ಕಿಚನ್) ಸ್ಥಾಪಿಸಿ ಅನ್ನಸೇವೆ ನಡೆಸಲಾಗುತ್ತಿದೆ.
ಯಾತ್ರೆಯ ಸುಗಮ ನಿರ್ವಹಣೆಗಾಗಿ ಜಿಐಎಸ್ (GIS) ಆಧಾರಿತ ʻಟೆಕ್ ಫಾರ್ ಸೇವಾ – ಪುರಿ ಅನ್ನಸೇವಾ 2026ʼ ತಂತ್ರಜ್ಞಾನ ವೇದಿಕೆಯನ್ನು ಬಳಸಲಾಗುತ್ತಿದೆ. ಈ ವ್ಯವಸ್ಥೆ ಸೇವಾ ಚಟುವಟಿಕೆಗಳ ಯೋಜನೆ, ಮೇಲ್ವಿಚಾರಣೆ, ಸಮನ್ವಯ ಹಾಗೂ ಕಾರ್ಯಾಚರಣೆಯ ನಿರ್ಧಾರ ಕೈಗೊಳ್ಳಲು ನೆರವಾಗುತ್ತಿದೆ.
ಯಾತ್ರಾ ಮಾರ್ಗದ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ದೇವಾಲಯದ ಪ್ರವೇಶ ದ್ವಾರಗಳು, ಸಾರಿಗೆ ಕೇಂದ್ರಗಳು, ವೈದ್ಯಕೀಯ ವಲಯಗಳು, ಪ್ರಮುಖ ಜಂಕ್ಷನ್‌ಗಳು ಹಾಗೂ ಕರಾವಳಿ ಪ್ರದೇಶಗಳಲ್ಲಿ ಸುಮಾರು 90 ಪೊಲೀಸ್ ಸಹಾಯ ಕೇಂದ್ರಗಳ ಸ್ಥಾಪನೆಗೂ ರಿಲಯನ್ಸ್ ಫೌಂಡೇಷನ್ ಬೆಂಬಲ ನೀಡಿದೆ.
ಸುದೀರ್ಘ ಅವಧಿಯ ಕರ್ತವ್ಯ ನಿರ್ವಹಿಸುವ ಸುಮಾರು 1,000 ಪೊಲೀಸ್ ಸಿಬ್ಬಂದಿಗೆ ಕುಡಿಯುವ ನೀರು, ಒಆರ್‌ಎಸ್, ಉಪಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ, ಸ್ವಯಂಸೇವಕರು ಯಾತ್ರಿಕರಿಗೆ ಮಾರ್ಗದರ್ಶನ, ಸುರಕ್ಷತಾ ಮಾಹಿತಿ ಹಾಗೂ ಅಗತ್ಯ ಸಹಾಯ ನೀಡುವ ಕೆಲಸದಲ್ಲಿ ತೊಡಗಿದ್ದಾರೆ.
ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಪುರಿ ಪುರಸಭೆಯೊಂದಿಗೆ ಕೈಜೋಡಿಸಿ ಕಸದ ಚೀಲಗಳು, ರಕ್ಷಣಾತ್ಮಕ ಕೈಗವಸುಗಳನ್ನು ವಿತರಿಸಲಾಗುತ್ತಿದ್ದು, ಆರೋಗ್ಯ, ನೈರ್ಮಲ್ಯ ಹಾಗೂ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಈ ಎಲ್ಲಾ ಸೇವಾ ಉಪಕ್ರಮಗಳಿಂದ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸುರಕ್ಷಿತ, ಶಿಸ್ತುಬದ್ಧ ಹಾಗೂ ಸುಗಮ ಸಂಚಾರಕ್ಕೆ ನೆರವಾಗಲಿದೆ ಎಂದು ರಿಲಯನ್ಸ್ ಫೌಂಡೇಷನ್ ತಿಳಿಸಿದೆ.
ಈ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ, “ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವವನ್ನು ನಾವು ನಂಬುತ್ತೇವೆ. ಲಕ್ಷಾಂತರ ಭಕ್ತರು ಸೇರುವ ರಥಯಾತ್ರೆಯಂತಹ ಮಹೋತ್ಸವದಲ್ಲಿ ಸೇವೆ ಸಲ್ಲಿಸುವ ಅವಕಾಶ ನಮಗೆ ಆಶೀರ್ವಾದವಾಗಿದೆ. ಯಾತ್ರಿಕರ ಪ್ರಯಾಣವನ್ನು ಸುಗಮಗೊಳಿಸುವುದರ ಜೊತೆಗೆ ಆಡಳಿತಕ್ಕೆ ನೆರವಾಗುವುದು, ಪೌಷ್ಟಿಕಾಂಶ, ಸುರಕ್ಷತೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವುದು ನಮ್ಮ ಬದ್ಧತೆಯಾಗಿದೆ” ಎಂದು ಹೇಳಿದರು.






















