ತೆಕ್ಕಲಕೋಟೆ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬೊಲೆರೊ ವಾಹನವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸಿರಿಗೇರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ 12.25 ಕ್ವಿಂಟಲ್ ಪಡಿತರ ಅಕ್ಕಿ, ಬೊಲೆರೊ ವಾಹನವನ್ನು ಜಪ್ತಿ ಮಾಡಲಾಗಿದ್ದು, ನಾಗರಾಜ ಎಂಬ ಆರೋಪಿಯನ್ನು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಿರಿಗೇರಿ ಸಮೀಪದ ಸಿದ್ದರಾಂಪುರದಿಂದ ಕರೂರು ಕಡೆಗೆ ಎಪಿ-39 ಟಿಎನ್-7384 ಸಂಖ್ಯೆಯ ಬೊಲೆರೊ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಗೂ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಧರ್. ವೈ ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಲಾಯಿತು.
ವಾಹನವನ್ನು ತಡೆದು ಪರಿಶೀಲಿಸಿದಾಗ ಸುಮಾರು 12.25 ಕ್ವಿಂಟಲ್ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ದಾಳಿಯಲ್ಲಿ 28,175 ರೂ. ಮೌಲ್ಯದ ಪಡಿತರ ಅಕ್ಕಿ ಹಾಗೂ ಸಾಗಣೆಗೆ ಬಳಸಿದ್ದ ಬೊಲೆರೊ ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ವಿರುದ್ಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಪಡಿತರ ಅಕ್ಕಿ ಸಾಗಣೆಯ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಆಹಾರ ಧಾನ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಜಿಲ್ಲಾಡಳಿತ ಹಾಗೂ ಆಹಾರ ಇಲಾಖೆ ನಿರಂತರ ಕಾರ್ಯಾಚರಣೆ ಮುಂದುವರಿಸಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





















