SK Home Ad
Home ಸುದ್ದಿ ದೇಶ ಲಾಲೂ ಪ್ರಸಾದ್‌ಗೆ ಸುಪ್ರೀಂ ರಿಲೀಫ್: ಜಾಮೀನು ಮುಂದುವರಿಕೆ

ಲಾಲೂ ಪ್ರಸಾದ್‌ಗೆ ಸುಪ್ರೀಂ ರಿಲೀಫ್: ಜಾಮೀನು ಮುಂದುವರಿಕೆ

0
72
File Photo

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ಹಲವು ವರ್ಷಗಳಿಂದ ಜಾಮೀನಿನ ಮೇಲೆ ಇರುವ ಲಾಲೂ ಪ್ರಸಾದ್ ಯಾದವ್ ಅವರ ಸ್ಥಿತಿಯನ್ನು ಈಗ ಬದಲಾಯಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: TET ಪರೀಕ್ಷೆಯ ಹೊಸ ದಿನಾಂಕ ಘೋಷಣೆಗೆ ರಾಹುಲ್ ಆಗ್ರಹ

ಜಾಮೀನು ರದ್ದುಪಡಿಸಲು ಕೋರ್ಟ್ ನಿರಾಕರಣೆ : ಜಾರ್ಖಂಡ್ ಹೈಕೋರ್ಟ್ ಮೇವು ಹಗರಣ ಪ್ರಕರಣದಲ್ಲಿ ಲಾಲೂ ಪ್ರಸಾದ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಜಾಮೀನು ನೀಡಿ ಈಗಾಗಲೇ ಹಲವು ವರ್ಷಗಳು ಕಳೆದಿವೆ. ಈ ಹಂತದಲ್ಲಿ ಅದನ್ನು ರದ್ದುಪಡಿಸುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, 2018ರಿಂದ ಬಾಕಿ ಉಳಿದಿರುವ ಕ್ರಿಮಿನಲ್ ಮೇಲ್ಮನವಿಗಳನ್ನು ಪರಿಗಣಿಸಿದ ನ್ಯಾಯಪೀಠ, ಜಾಮೀನು ರದ್ದುಪಡಿಸುವ ಬದಲು ಆರು ತಿಂಗಳ ಒಳಗಾಗಿ ಲಾಲೂ ಅವರ ಮೇಲ್ಮನವಿ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಾರ್ಖಂಡ್ ಹೈಕೋರ್ಟ್‌ಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!

ಸಿಬಿಐ ವಾದವೇನು? : ಸಿಬಿಐ ಪರ ಹಾಜರಾಗಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿ ಕಳೆದ ಅವಧಿಯನ್ನು ಲೆಕ್ಕ ಹಾಕುವಲ್ಲಿ ಜಾರ್ಖಂಡ್ ಹೈಕೋರ್ಟ್ ತಪ್ಪು ಮಾಡಿದೆ ಎಂದು ವಾದಿಸಿದರು. ಅವರ ಶಿಕ್ಷೆಗಳು ಒಂದರ ನಂತರ ಮತ್ತೊಂದು (Consecutive Sentence) ಜಾರಿಯಾಗಬೇಕಿತ್ತು. ಆ ಲೆಕ್ಕಾಚಾರದ ಪ್ರಕಾರ ಲಾಲೂ ಅವರ ಒಟ್ಟು ಶಿಕ್ಷೆ ಸುಮಾರು 14 ವರ್ಷಗಳಾಗುತ್ತದೆ. ಹೀಗಾಗಿ ಅವರು ಅರ್ಧ ಶಿಕ್ಷೆ ಪೂರೈಸಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನೀಡಿರುವುದು ಕಾನೂನುಬದ್ಧವಲ್ಲ ಎಂದು ಸಿಬಿಐ ವಾದಿಸಿತು.

ಕಪಿಲ್ ಸಿಬಲ್ ಪ್ರತಿವಾದ : ಲಾಲೂ ಪ್ರಸಾದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಶಿಕ್ಷೆಗಳು ಒಂದರ ನಂತರ ಮತ್ತೊಂದು ಜಾರಿಯಾಗುವ ನಿಯಮಗಳು ಅಂತಿಮ ತೀರ್ಪಿನ ಹಂತಕ್ಕೆ ಮಾತ್ರ ಅನ್ವಯಿಸುತ್ತವೆ. ಮಧ್ಯಂತರವಾಗಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವ ಸಂದರ್ಭದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ ಎಂದು ವಾದಿಸಿದರು.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನ ಗೋಡೆ ಹಾರಿ ಮೂವರು ಕೈದಿಗಳು ಎಸ್ಕೇಪ್

ವಿಚಾರಣೆ ವೇಳೆ 77 ವರ್ಷದ ಲಾಲೂ ಪ್ರಸಾದ್ ಯಾದವ್ ಅವರ ವಯಸ್ಸು ಮತ್ತು 2022ರಲ್ಲಿ ಅವರು ಮಾಡಿಸಿಕೊಂಡಿರುವ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಸೇರಿದಂತೆ ಅವರ ಆರೋಗ್ಯ ಪರಿಸ್ಥಿತಿಯನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಏನಿದು ಮೇವು ಹಗರಣ? : 1992ರಿಂದ 1995ರ ಅವಧಿಯಲ್ಲಿ ಅವಿಭಜಿತ ಬಿಹಾರದಲ್ಲಿ ಮೇವು, ಔಷಧ ಹಾಗೂ ಕೃಷಿ ಉಪಕರಣಗಳ ಖರೀದಿ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಿ ಖಜಾನೆಯಿಂದ ಸುಮಾರು 950 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಡ್ರಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಒಟ್ಟು 55 ಪ್ರಕರಣಗಳು ದಾಖಲಾಗಿದ್ದು, ಲಾಲೂ ಪ್ರಸಾದ್ ಯಾದವ್ ವಿರುದ್ಧ ಚೈಬಾಸಾ, ದಿಯೋಘರ್, ಡುಮ್ಕಾ ಹಾಗೂ ಡೊರಾಂಡಾ ಖಜಾನೆ ವಂಚನೆಗೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ ದೋಷ ಸಾಬೀತಾಗಿದೆ.

ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವಶ

ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನಿಂದ ಲಾಲೂ ಪ್ರಸಾದ್ ಯಾದವ್ ಅವರಿಗೆ ತಾತ್ಕಾಲಿಕವಾಗಿ ದೊಡ್ಡ ರಿಲೀಫ್ ದೊರೆತಿದ್ದು, ಅವರ ಜಾಮೀನು ಮುಂದುವರಿಯಲಿದೆ.