SK Home Ad
Home ನಮ್ಮ ಜಿಲ್ಲೆ ಬೆಳಗಾವಿ ನೇಪಾಳದಲ್ಲಿ ಬೆಳಗಾವಿ ಯುವಕನ ಹತ್ಯೆ: ರೂಮ್‌ಮೇಟ್‌ ವಿರುದ್ಧ ಆರೋಪ

ನೇಪಾಳದಲ್ಲಿ ಬೆಳಗಾವಿ ಯುವಕನ ಹತ್ಯೆ: ರೂಮ್‌ಮೇಟ್‌ ವಿರುದ್ಧ ಆರೋಪ

0
85

ನೇಪಾಳದಲ್ಲಿ ಬೆಳಗಾವಿ ಯುವಕನ ಹತ್ಯೆ; ರೂಮ್‌ಮೇಟ್‌ನಿಂದ ಚಾಕುವಿನಿಂದ ಇರಿದು ಕೊಲೆ ಆರೋಪ

ಬೆಳಗಾವಿ: ಉದ್ಯೋಗ ಅರಸಿ ನೇಪಾಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಯುವಕನೊಬ್ಬನನ್ನು ಆತನ ರೂಮ್‌ಮೇಟ್‌ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಖಾನಾಪುರದ ಮುಸ್ಲಿಂ ನಿಂಗಾಪುರ ಗಲ್ಲಿಯ ನಿವಾಸಿ ಸಾಹಿಲ್‌ ರಿಯಾಜ್‌ ಅಹದ್‌ ಮೊಮೀನ್‌ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಸಾಹಿಲ್‌ ಮೊಮೀನ್‌ ಅವರು ಕೆಲ ವರ್ಷಗಳ ಕಾಲ ದುಬೈ ಹಾಗೂ ನಂತರ ಥೈಲ್ಯಾಂಡ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. ಸುಮಾರು 25 ದಿನಗಳ ಹಿಂದೆ ಅವರು ನೇಪಾಳದ ಝಾಪಾ ಜಿಲ್ಲೆಯ ದಮಕದಲ್ಲಿರುವ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅವರು ಸದ್ದಾಂ ಹುಸೇನ್‌ ಎಂಬ ವ್ಯಕ್ತಿಯೊಂದಿಗೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಅಕ್ರಮ ಆರೋಪದ ಬೆನ್ನಲ್ಲೇ KPSC ಅಧ್ಯಕ್ಷ ಸಾಹುಕಾರ್‌ ಅಮಾನತು

ರಾತ್ರಿ ವಾಗ್ವಾದ, ಮುಂಜಾನೆ ಭೀಕರ ಕೃತ್ಯ : ಮೂಲಗಳ ಪ್ರಕಾರ, ಘಟನೆ ನಡೆದ ಹಿಂದಿನ ದಿನ ಸಾಹಿಲ್‌ ಅವರು ಬೆಳಗಾವಿಯ ತಮ್ಮ ಸ್ನೇಹಿತನೊಬ್ಬನನ್ನು ಅದೇ ಹೋಟೆಲ್‌ನಲ್ಲಿ ಉದ್ಯೋಗಕ್ಕಾಗಿ ಕರೆಸಿಕೊಂಡಿದ್ದರು. ರಾತ್ರಿ ಮೂವರೂ ಒಂದೇ ಕೊಠಡಿಯಲ್ಲಿ ಮಲಗಿದ್ದ ವೇಳೆ ಸಾಹಿಲ್‌ ಮತ್ತು ಸದ್ದಾಂ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಈ ವೇಳೆ ಸ್ನೇಹಿತ ಮಧ್ಯಸ್ಥಿಕೆ ವಹಿಸಿ ಇಬ್ಬರ ನಡುವಿನ ಜಗಳವನ್ನು ಶಾಂತಗೊಳಿಸಿದ್ದಾನೆ. ಆದರೆ, ಮುಂಜಾನೆ ವೇಳೆ ನಿದ್ರೆಯಲ್ಲಿದ್ದ ಸಾಹಿಲ್‌ ಮೇಲೆ ಸದ್ದಾಂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: 17 ವರ್ಷಗಳ ಬಳಿಕ CSKಗೆ ವಿದಾಯ ಹೇಳಿದ ಸ್ಟೀಫನ್ ಫ್ಲೆಮಿಂಗ್

ಕಿರುಚಾಟ ಕೇಳಿ ಧಾವಿಸಿದ ಸ್ನೇಹಿತ : ಸಾಹಿಲ್‌ ಅವರ ಕಿರುಚಾಟ ಕೇಳಿ ಸ್ನೇಹಿತ ಆರೋಪಿಯನ್ನು ಹಿಡಿಯಲು ಯತ್ನಿಸಿದ್ದರೂ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಾಹಿಲ್‌ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕುಟುಂಬದ ಆಕ್ರಂದನ : ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಖಾನಾಪುರದಲ್ಲಿರುವ ಸಾಹಿಲ್‌ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದವರು ಹಾಗೂ ಸ್ಥಳೀಯ ಮುಖಂಡರು ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸಂಬಂಧಿತ ಅಧಿಕಾರಿಗಳ ನೆರವಿನಿಂದ ಮೃತದೇಹವನ್ನು ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಯೋಗಿ ಸಮ್ಮುಖದಲ್ಲಿ ಲಕ್ನೋ-ಕಾನ್ಪುರ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ

ತನಿಖೆ ಆರಂಭ : ಘಟನೆಯ ಕುರಿತು ನೇಪಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿ ಸದ್ದಾಂ ಹುಸೇನ್‌ನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಘಟನೆ ವಿದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕನ್ನಡಿಗರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.