SK Home Ad
Home ಸುದ್ದಿ ವಿದೇಶ ವಿಯೆಟ್ನಾಂನಲ್ಲಿ ಭಾರತೀಯರಿದ್ದ ಬೋಟ್ ಮುಳುಗಡೆ: 15 ಸಾವು!

ವಿಯೆಟ್ನಾಂನಲ್ಲಿ ಭಾರತೀಯರಿದ್ದ ಬೋಟ್ ಮುಳುಗಡೆ: 15 ಸಾವು!

0
121

ಹನೋಯ್: ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ ದ್ವೀಪದ ಸಮೀಪ ಶನಿವಾರ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತದಲ್ಲಿ 32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿ ಸೇರಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು.

ವಿಯೆಟ್ನಾಂನ ಹೊನ್ ಮೇ ರುಟ್ ನ್ಗೋಯ್ ಪ್ರದೇಶದ ಸಮೀಪ ಸ್ಪೀಡ್‌ಬೋಟ್ ಮಗುಚಿಬಿದ್ದಿದ್ದು, ದೋಣಿಯಲ್ಲಿದ್ದ ಎಲ್ಲರೂ ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Pocso ಪ್ರಕರಣದ ಆರೋಪಿಯ ಭೀಕರ ಪ್ರತೀಕಾರ: 6 ಜೀವ ಬಲಿ

400 ಮೀಟರ್ ದೂರದಲ್ಲಿ ಮಗುಚಿದ ಬೋಟ್ : ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಹಾನ್ ಮೇ ರುಟ್‌ನಿಂದ ಆನ್ ಥೋಯ್ ಬಂದರಿಗೆ ತೆರಳುತ್ತಿದ್ದ ಸ್ಪೀಡ್‌ಬೋಟ್, ಹೊನ್ ಮೇ ರುಟ್ ನ್ಗೋಯ್‌ನಿಂದ ಸುಮಾರು 400 ಮೀಟರ್ ದೂರದಲ್ಲಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಘಟನೆ ಸಂಭವಿಸಿದ ತಕ್ಷಣ ಸಮೀಪದಲ್ಲಿದ್ದ ಪ್ರವಾಸಿ ದೋಣಿಗಳು ಮತ್ತು ಮೀನುಗಾರಿಕಾ ಬೋಟ್‌ಗಳು ರಕ್ಷಣಾ ಕಾರ್ಯಾಚರಣೆಗೆ ಮುಂದಾದವು. ನಂತರ ಗಡಿ ಕಾವಲು ಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಆಡಳಿತದ ತಂಡಗಳು ಜಂಟಿಯಾಗಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

ಆಂಧ್ರಪ್ರದೇಶದ ಇಬ್ಬರು ಪ್ರವಾಸಿಗರ ಸಾವು : ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ದುರಂತದಲ್ಲಿ ಆಂಧ್ರಪ್ರದೇಶದ ಕಡಪ ಮೂಲದ ಮುದಿಯಂ ಶ್ರೀಧರ್ (56) ಮತ್ತು ಮಚಲಿಪಟ್ಟಣದ ಗೆಲ್ಲಿ ಜಯಶ್ರೀ ಮೃತಪಟ್ಟಿದ್ದಾರೆ. ಇನ್ನೊಬ್ಬ ಪ್ರವಾಸಿಗ ಗೆಲ್ಲಿ ಕಿಶೋರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಕಡಪ ನಿವಾಸಿ ನಯೀಮ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: DCM ಪವನ್‌ಗೆ ಶಸ್ತ್ರಚಿಕಿತ್ಸೆ : 2 ತಿಂಗಳ ಬಳಿಕ ಮತ್ತೊಂದು ಸರ್ಜರಿ!

ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ : ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರವಾಸಿಗರು ಇನ್ನೂ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಭಾರತೀಯ ರಾಯಭಾರ ಕಚೇರಿಯಿಂದ ತುರ್ತು ಸಹಾಯವಾಣಿ: ಘಟನೆಗೆ ಸಂಬಂಧಿಸಿದಂತೆ ಹನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಹೋ ಚಿ ಮಿನ್ಹ್ ನಗರದ ಭಾರತೀಯ ಕಾನ್ಸುಲೇಟ್ ತುರ್ತು ಸಹಾಯವಾಣಿ ಆರಂಭಿಸಿವೆ.
ಸಹಾಯಕ್ಕಾಗಿ ಈ ಸಂಖ್ಯೆಗಳ ಸಂಪರ್ಕಿಸಬಹುದು: +84 36 281 7930, +84 91 552 37 14, +84 33 452 0414, +84 91 308 9165

ಯಾವುದೇ ಮಾಹಿತಿ, ನೆರವು ಅಥವಾ ಸಂಬಂಧಿಕರ ವಿವರಗಳಿಗಾಗಿ ಅಧಿಕಾರಿಗಳು 24 ಗಂಟೆಯೂ ಲಭ್ಯವಿರಲಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ರಾಯಭಾರ ಕಚೇರಿ: “ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿಬಿದ್ದಿದೆ. ಘಟನೆಯ ಬಗ್ಗೆ ನಾವು ನಿಕಟವಾಗಿ ಗಮನ ಹರಿಸುತ್ತಿದ್ದೇವೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಖಾತೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ‘ಕರಾವಳಿ’ ವಿವಾದ ಏನೇ ಇರಲಿ ಸಿನಿಮಾ ಗೆಲ್ಲಿಸಿ: ಪ್ರಜ್ವಲ್ ಮನವಿ

ಈ ದುರಂತ ಭಾರತ ಸೇರಿದಂತೆ ವಿಯೆಟ್ನಾಂನಲ್ಲೂ ಆತಂಕ ಮತ್ತು ದುಃಖದ ವಾತಾವರಣ ಸೃಷ್ಟಿಸಿದ್ದು, ನಾಪತ್ತೆಯಾದವರ ಸುರಕ್ಷತೆಗಾಗಿ ಕುಟುಂಬಸ್ಥರು ಕಾದು ಕುಳಿತಿದ್ದಾರೆ.

ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ಅಪಘಾತಕ್ಕೀಡಾದ ದೋಣಿಯಲ್ಲಿ 32 ಭಾರತೀಯ ಪ್ರವಾಸಿಗರು ಇದ್ದರು. ಭಾರತೀಯ ಪ್ರವಾಸಿಗರು ವಿವರ ಈ ಕೆಳಗಿನಂತಿದೆ. ಸಾವುನೋವುಗಳ ಕುರಿತು ಹೆಚ್ಚಿನ ವಿವರಗಳನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಶೀಘ್ರದಲ್ಲೇ ನವೀಕರಿಸುತ್ತೇವೆ” ಎಂದು ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.