ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಬಲ ಭುಜದ ಮೇಲೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳಿಂದ ಬಳಲುತ್ತಿದ್ದ ಪವನ್ ಕಲ್ಯಾಣ್ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಸಲಹೆ ನೀಡಿದ್ದರು.
ವರದಿಗಳ ಪ್ರಕಾರ, ಪವನ್ ಕಲ್ಯಾಣ್ ಅವರು 2016ರಲ್ಲಿ ಸಂಭವಿಸಿದ್ದ ಗಾಯದಿಂದ ದೀರ್ಘಕಾಲದಿಂದ ಬಳಲುತ್ತಿದ್ದರು. ನಂತರ ಪಕ್ಷದ ಯಾತ್ರೆಗಳು, ಚುನಾವಣಾ ಪ್ರಚಾರಗಳು ಹಾಗೂ ನಿರಂತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಗಾಯ ಮತ್ತಷ್ಟು ಉಲ್ಬಣಗೊಂಡಿತ್ತು.
ಇದನ್ನೂ ಓದಿ: ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ಅನುಪಮ್ ಖೇರ್ ಹೊಸ ಲುಕ್
ಮುಂಬೈನ ಆಸ್ಪತ್ರೆಯಲ್ಲಿ ವೈದ್ಯರ ತಂಡ ಸುಮಾರು ಮೂರುವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದು, ಬಲ ಭುಜದ ರೋಟೇಟರ್ ಕಫ್ ಸಮಸ್ಯೆಗೆ ಚಿಕಿತ್ಸೆ ನೀಡಲಾಗಿದೆ. ಎರಡೂ ಭುಜಗಳಿಗೆ ಒಂದೇ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರೆ ಚೇತರಿಕೆ ಅವಧಿಯಲ್ಲಿ ಹೆಚ್ಚಿನ ನೋವು ಉಂಟಾಗುವ ಸಾಧ್ಯತೆ ಇರುವುದರಿಂದ, ಸದ್ಯಕ್ಕೆ ಬಲ ಭುಜಕ್ಕೆ ಮಾತ್ರ ಸರ್ಜರಿ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ಸಲಹೆಯಂತೆ ಸುಮಾರು ಎರಡು ತಿಂಗಳ ಅಂತರದ ಬಳಿಕ ಪವನ್ ಕಲ್ಯಾಣ್ ಅವರ ಎಡ ಭುಜಕ್ಕೂ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲು ಯೋಜಿಸಲಾಗಿದೆ.
ಇದನ್ನೂ ಓದಿ: ‘ಕರಾವಳಿ’ ಟ್ರೇಲರ್ ರಿಲೀಸ್ ಗಲಾಟೆ; ಪ್ರಜ್ವಲ್ ಆಪ್ತರ ವಿರುದ್ಧ FIR
ಪವನ್ ಕಲ್ಯಾಣ್ ಅವರ ಆರೋಗ್ಯದ ಕುರಿತು ಮಾಹಿತಿ ಹೊರಬಿದ್ದ ತಕ್ಷಣ ಅಭಿಮಾನಿಗಳು ಹಾಗೂ ಜನಸೇನಾ ಕಾರ್ಯಕರ್ತರು ಅವರ ಶೀಘ್ರ ಚೇತರಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳ ನಡುವೆಯೂ ಅವರು ತಮ್ಮ ಸರ್ಕಾರಿ ಹಾಗೂ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂಬುದು ಗಮನಾರ್ಹವಾಗಿದೆ.






















