SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ರಾಷ್ಟ್ರೀಯ ಚಿಂತನ ಮಂಥನ

ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ರಾಷ್ಟ್ರೀಯ ಚಿಂತನ ಮಂಥನ

0
51

ಮೋಹನ್ ಭಾಗವತ್‌, ದತ್ತಾತ್ರೇಯ ಹೊಸಬಾಳೆ ಭಾಗಿ: 46 ಪ್ರಾಂತಗಳ ಪ್ರಚಾರಕರ ಸಮಾಗಮ

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಶುಕ್ರವಾರ ಬೆಳಿಗ್ಗೆ ಬೆಳಗಾವಿಯಲ್ಲಿ ಆರಂಭವಾಯಿತು.

ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಂಘದ ಪ್ರಮುಖ ರಾಷ್ಟ್ರೀಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಕಾರ್ಯ ವಿಭಾಗಗಳ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಸಭೆಯಲ್ಲಿ ಉಪಸ್ಥಿತರಿದ್ದರು.

ದೇಶದಾದ್ಯಂತ ಸಂಘದ ಆಡಳಿತಾತ್ಮಕವಾಗಿ ಗುರುತಿಸಲಾದ 46 ಪ್ರಾಂತಗಳ ಪ್ರಾಂತ ಪ್ರಚಾರಕರು ಮತ್ತು ಸಹ ಪ್ರಾಂತ ಪ್ರಚಾರಕರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸಂಘದ ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಸಚಿವರೂ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಾಖೆಗಳ ವಿಸ್ತರಣೆಗೆ ಹೊಸ ಕಾರ್ಯಯೋಜನೆ: 2026ರ ಮಾರ್ಚ್‌ ನಂತರ ಸಂಘದ ವಿವಿಧ ಹಂತಗಳಲ್ಲಿ ನಡೆದ ತರಬೇತಿ ವರ್ಗಗಳ ವರದಿಯನ್ನು ಸಭೆಯಲ್ಲಿ ಮಂಡಿಸಲಾಗುತ್ತದೆ. ತರಬೇತಿ ವರ್ಗಗಳ ಅನುಭವ, ಕಾರ್ಯಕರ್ತರ ಸಿದ್ಧತೆ ಹಾಗೂ ಶಾಖಾ ಮಟ್ಟದಲ್ಲಿ ರೂಪಿಸಲಾದ ಯೋಜನೆಗಳ ಅನುಷ್ಠಾನದ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.

ಸಂಘದ ಶತಮಾನೋತ್ಸವದ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಕೈಗೊಂಡಿರುವ ಶಾಖಾ ವಿಸ್ತರಣಾ ಕಾರ್ಯದ ಪ್ರಗತಿ ಪರಿಶೀಲನೆಯೂ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ. ಈಗಾಗಲೇ ವಿಸ್ತರಿಸಿರುವ ಶಾಖೆಗಳ ಕಾರ್ಯಕ್ಷಮತೆಯ ಅವಲೋಕನದ ಜತೆಗೆ, ಮುಂದಿನ ದಿನಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಶಾಖೆಗಳನ್ನು ಆರಂಭಿಸುವ ಯೋಜನೆಯ ಕುರಿತು ಚರ್ಚಿಸಲಾಗುತ್ತದೆ.

ಶತಮಾನೋತ್ಸವ ಕಾರ್ಯಕ್ರಮಗಳ ಅವಲೋಕನ: ಆರ್‌ಎಸ್‌ಎಸ್‌ನ ಶತಮಾನೋತ್ಸವ ವರ್ಷದಲ್ಲಿ ಇದುವರೆಗೆ ನಡೆದ ಕಾರ್ಯಕ್ರಮಗಳು, ಸಾರ್ವಜನಿಕ ಸಂಪರ್ಕ ಚಟುವಟಿಕೆಗಳು ಮತ್ತು ಸಂಘಟನಾ ಕಾರ್ಯಗಳ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಯಲಿದೆ. ಇನ್ನೂ ಬಾಕಿ ಇರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಾಗುತ್ತದೆ.

2025–26ನೇ ಸಾಲಿನ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳು: 2026ರ ವಿಜಯ ದಶಮಿಯವರೆಗೆ ಮುಂದುವರಿಯಲಿವೆ. ಅಕ್ಟೋಬರ್‌ 20ರಂದು ನಡೆಯಲಿರುವ ವಿಜಯದಶಮಿ ಕಾರ್ಯಕ್ರಮದವರೆಗೆ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ಸ್ವರೂಪದ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಭಾಗವತ್‌ ಪ್ರವಾಸದ ರೂಪುರೇಷೆ: ಸರಸಂಘಚಾಲಕ ಡಾ. ಮೋಹನ್ ಭಾಗವತ್‌ ಅವರ 2026–27ನೇ ಸಾಲಿನ ದೇಶವ್ಯಾಪಿ ಪ್ರವಾಸ ಯೋಜನೆಯೂ ಸಭೆಯ ಚರ್ಚಾ ವಿಷಯವಾಗಿದೆ. ವಿವಿಧ ಪ್ರಾಂತಗಳಿಗೆ ಅವರ ಭೇಟಿ, ಸಂಘಟನಾ ಸಭೆಗಳು, ಕಾರ್ಯಕರ್ತರೊಂದಿಗೆ ಸಂವಾದ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ವೇಳಾಪಟ್ಟಿಗೆ ಅಂತಿಮ ರೂಪ ನೀಡಲಾಗುತ್ತದೆ.

ರಾಷ್ಟ್ರೀಯ ಮಟ್ಟದ ಪ್ರಮುಖ ಪದಾಧಿಕಾರಿಗಳು ಮತ್ತು ದೇಶದ ಎಲ್ಲ ಪ್ರಾಂತಗಳ ಪ್ರಚಾರಕರು ಒಂದೆಡೆ ಸೇರಿರುವುದರಿಂದ, ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಸಭೆ ಸಂಘದ ಮುಂದಿನ ಕಾರ್ಯದಿಕ್ಕು ಹಾಗೂ ಶತಮಾನೋತ್ಸವದ ಅಂತಿಮ ಹಂತದ ಕಾರ್ಯಕ್ರಮಗಳಿಗೆ ಮಹತ್ವದ ವೇದಿಕೆಯಾಗಿದೆ.