ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಷಡ್ಯಂತ್ರ ರೂಪಿಸಿ ಜಾಗತಿಕ ಮಟ್ಟದಲ್ಲಿ ಅನಧಿಕೃತ ಅಪಪ್ರಚಾರ ಹಾಗೂ ವದಂತಿಗಳನ್ನು ಪಸರಿಸಿ ಕಳಂಕವನ್ನುಂಟು ಮಾಡಿದ ಪ್ರಕರಣವನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ವತಿಯಿಂದ ಶುಕ್ರವಾರ ಕೋರ್ ಕಮಿಟಿಯ ಏಳು ಜನ ಸದಸ್ಯರು ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಬೆಂಬಲ ಪತ್ರವನ್ನು ಅರ್ಪಿಸಿದರು.
ಮಹಾಸಭಾದ ಮುಖ್ಯಸ್ಥರಾದ ಡಾ. ಪ್ರಣವಾನಂದ ರಾವ್ ಮಹಾಸ್ವಾಮೀಜಿ ನೇತೃತ್ವದಲ್ಲಿ ಬಂದ ಸದಸ್ಯರು ಜೂನ್ 27 ಮತ್ತು 28 ರಂದು ಕಲಬುರಗಿಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಧರ್ಮಸ್ಥಳದ ಕಳಂಕ ನಿವಾರಿಸಿ ಪಾವಿತ್ರ್ಯ ರಕ್ಷಣೆಗೆ ತಮ್ಮ ಪೂರ್ಣ ಬೆಂಬಲ ನೀಡುವ ಬಗ್ಗೆ ಪತ್ರವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು.
ಹೆಗ್ಗಡೆಯವರಿಗೆ ದೇವರು ಪೂರ್ಣ ಆರೋಗ್ಯ ಭಾಗ್ಯ ನೀಡಿ ನಿರಂತರ ಸೇವಾ ಕಾರ್ಯ ಮುಂದುವರಿಸುವಂತೆ ಹರಸಲೆಂದು ಪ್ರಾರ್ಥಿಸಿದರು. ಷಡ್ಯಂತ್ರ ರೂಪಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸದ್ಯದಲ್ಲೇ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒತ್ತಾಯಿಸುವುದಾಗಿ ಸ್ವಾಮೀಜಿ ತಿಳಿಸಿದರು.
ಸುಮಾರು ಇನ್ನೂರು ಜನ ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಸಾವಿರಾರು ಜನ ಬಂದು ಭಕ್ತರ ಸಮಾವೇಶ ನಡೆಸಲಾಗುವುದು. ಈ ಬಗ್ಗೆ ಡಾ. ಹೆಗ್ಗಡೆಯವರಲ್ಲಿಯೂ ಪ್ರಸ್ತಾಪಿಸಿದ್ದು ಮುಂದೆ ಸೂಕ್ತ ಸಿದ್ಧತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.






















