ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಬಾಪೂಜಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ.ಇ. ರಂಗಸ್ವಾಮಿ ಅವರನ್ನು ಕರ್ನಾಟಕ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ರ ಸೆಕ್ಷನ್ 14(4)ರ ಅನ್ವಯ, ಶೋಧನಾ ಸಮಿತಿಯ ಶಿಫಾರಸು ಹಾಗೂ ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ. ಡಾ. ರಂಗಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ನಾಲ್ಕು ವರ್ಷಗಳ ಅವಧಿಗೆ ಅಥವಾ 67 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲು ಸಂಭವಿಸುತ್ತದೆಯೋ ಅಲ್ಲಿಯವರೆಗೆ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ. ಬಿ.ಡಿ. ಕುಂಬಾರ್ ಅವರ ಅಧಿಕಾರಾವಧಿ 67 ವರ್ಷ ವಯಸ್ಸು ಪೂರ್ಣಗೊಂಡ ಹಿನ್ನೆಲೆಯಲ್ಲಿ 2026ರ ಮೇ 31ರಂದು ಅಂತ್ಯಗೊಂಡಿತ್ತು. ಬಳಿಕ ಶಿಕ್ಷಣ ವಿಭಾಗದ ಡೀನ್ ಪ್ರೊ. ಡಾ. ವೆಂಕಟೇಶ್ ಕೆ. ಅವರು 2026ರ ಮೇ 31ರಿಂದ ಜುಲೈ 7ರವರೆಗೆ ಕಾರ್ಯನಿರ್ವಹಣಾ ಕುಲಪತಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ರಾಜ್ಯ ಸರ್ಕಾರ ರಚಿಸಿದ್ದ ಶೋಧನಾ ಸಮಿತಿಯು ಸಲ್ಲಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿದ ನಂತರ, ಅರ್ಹತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಡಾ. ಬಿ.ಇ. ರಂಗಸ್ವಾಮಿ ಅವರನ್ನು ಕುಲಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಪಾಲರ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಡಾ. ರಂಗಸ್ವಾಮಿ ಅವರ ನೇಮಕಾತಿಯಿಂದ ದಾವಣಗೆರೆ ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನಾ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.





















