SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಅಂಬೋಲಿ ಘಾಟ್‌ನಲ್ಲಿ ಭಾರಿ ಭೂಕುಸಿತ: ಬೆಳಗಾವಿ-ಗೋವಾ ಸಂಪರ್ಕ ಅಸ್ತವ್ಯಸ್ತ

ಅಂಬೋಲಿ ಘಾಟ್‌ನಲ್ಲಿ ಭಾರಿ ಭೂಕುಸಿತ: ಬೆಳಗಾವಿ-ಗೋವಾ ಸಂಪರ್ಕ ಅಸ್ತವ್ಯಸ್ತ

0
6

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಮಂಗಳವಾರ ತಡ ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ಗುಡ್ಡದಿಂದ ಬೃಹತ್ ಬಂಡೆಗಳು ಉರುಳಿ ಬೆಳಗಾವಿ ವೆಂಗುರ್ಲಾ ರಾಜ್ಯ ಹೆದ್ದಾರಿಯ ಮೇಲೆ ಬಿದ್ದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಹಲವು ಕಾರುಗಳು ಘಾಟ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಘಟನೆ ನಡೆದಿದೆ. ವಾಹನಗಳು ಆ ಪ್ರದೇಶವನ್ನು ದಾಟಿದ ಕೆಲವೇ ಕ್ಷಣಗಳಲ್ಲಿ ಬೃಹತ್ ಬಂಡೆಗಳು ಗುಡ್ಡದಿಂದ ಉರುಳಿಬಿದ್ದಿವೆ. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಅಪಾಯದಿಂದ ಪಾರಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮತ್ತಷ್ಟು ಭೂಕುಸಿತ ಸಂಭವಿಸುವ ಆತಂಕ ಇರುವುದರಿಂದ ಘಾಟ್ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಬೃಹತ್ ಬಂಡೆಗಳನ್ನು ತೆರವುಗೊಳಿಸಲು ಜೆಸಿಬಿ ಸೇರಿದಂತೆ ಭಾರಿ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ನಿರಂತರ ಮಳೆಯಿಂದ ಗುಡ್ಡದ ಮಣ್ಣು ಮತ್ತಷ್ಟು ಸಡಿಲಗೊಳ್ಳುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಘಾಟ್ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೆ ಅಂಬೋಲಿ ಘಾಟ್ ಮಾರ್ಗದಲ್ಲಿ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.