SK Home Ad
Home ನಮ್ಮ ಜಿಲ್ಲೆ ಬೆಳಗಾವಿ 9 ವರ್ಷದ ಬಹಿಷ್ಕಾರ ಮತ್ತೆ ವೈರಲ್: ಉಪನ್ಯಾಸಕನಿಂದ ದೂರು

9 ವರ್ಷದ ಬಹಿಷ್ಕಾರ ಮತ್ತೆ ವೈರಲ್: ಉಪನ್ಯಾಸಕನಿಂದ ದೂರು

0
65

ಬೆಳಗಾವಿ: ಸುಮಾರು ಒಂಬತ್ತು ವರ್ಷಗಳ ಹಿಂದಿನ ‘ಸಾಮಾಜಿಕ ಬಹಿಷ್ಕಾರ’ದ ಗಾಯ ಮತ್ತೆ ಕೆದಕಿ, ವಾಟ್ಸಪ್‌ ಗುಂಪುಗಳ ಮೂಲಕ ತಮ್ಮ ಹಾಗೂ ಕುಟುಂಬದ ಮಾನಹಾನಿಗೆ ಯತ್ನಿಸಲಾಗುತ್ತಿದೆ ಎಂದು ಯಮಕನಮರಡಿಯ ಉಪನ್ಯಾಸಕ ವಿಜಯಕುಮಾರ ಗಂಗಾಧರ ಮೇದಾರ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಾದ್ಯಂತ ಮೇದಾರ ಸಮಾಜದ ಸುಮಾರು 18 ರಿಂದ 20 ವಾಟ್ಸಪ್ ಗುಂಪುಗಳಲ್ಲಿ ತಮ್ಮ ಕುಟುಂಬದ ವಿರುದ್ಧ ಸಂದೇಶ ಹರಿಬಿಟ್ಟು ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತರಲಾಗಿದೆ ಎಂದು ಅವರು ಬೆಳಗಾವಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಯಮಕನಮರಡಿಯ ಮೇದಾರ ಗಲ್ಲಿಯ ನಿವಾಸಿಯಾಗಿರುವ ವಿಜಯಕುಮಾರ, ಕಳೆದ ಸುಮಾರು ಹತ್ತು ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಮೇದಾರ ಸಮಾಜದ ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅವರಿಗೆ ಬುದ್ಧಿವಾದ ಹೇಳಿದ್ದಕ್ಕಾಗಿ ಸಮಾಜದ ಕೆಲ ಮುಖಂಡರು ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದರು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಹಿಷ್ಕಾರದ ನೋವು ತಮ್ಮ ಕುಟುಂಬವನ್ನು ವರ್ಷಗಳಿಂದ ಕಾಡುತ್ತಿದೆ. ಸಮಾಜದವರೇ ಕುಟುಂಬವನ್ನು ದೂರವಿಟ್ಟಿದ್ದಾರೆ ಎಂಬ ಆಘಾತದಿಂದ ತಮ್ಮ ತಂದೆ ಗಂಗಾಧರ ಕುಬಣ್ಣ ಮೇದಾರ ತೀವ್ರ ಮನನೊಂದಿದ್ದರು. ಇದೇ ನೋವಿನ ನಡುವೆ ಅವರು 2026ರ ಜೂನ್ 5ರಂದು ಮೃತಪಟ್ಟಿದ್ದಾರೆ ಎಂದು ವಿಜಯಕುಮಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹುಣಸಿಕೊಳ್ಳ ಮಠದ ಸ್ವಾಮೀಜಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ವಿವಿಧ ಭಾಗಗಳಿಂದ ತಮಗೆ ನಿರಂತರ ದೂರವಾಣಿ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಜುಲೈ 4ರಂದು ಕೆಲವು ವಾಟ್ಸಪ್ ಗುಂಪುಗಳ ಮೂಲಕ ತಾವು ಸ್ಪಷ್ಟೀಕರಣ ನೀಡಿದ್ದಾಗಿ ವಿಜಯಕುಮಾರ ತಿಳಿಸಿದ್ದಾರೆ.

ನನ್ನ ಕುಟುಂಬದ ಸಾಮಾಜಿಕ ಗೌರವ ಹಾಳುಮಾಡಲು ಹಳೆಯ ವಿಷಯ ಮತ್ತೆ ಕೆದಕಲಾಗಿದೆ. ಇದನ್ನು ರಾಜಕೀಯ ವಿವಾದವನ್ನಾಗಿ ಬಿಂಬಿಸುವುದು ಸರಿಯಲ್ಲ. ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ಮಾನಹಾನಿಕರ ಸಂದೇಶ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ವಾಟ್ಸಪ್ ಗುಂಪುಗಳಲ್ಲಿ ಹರಿದಾಡಿದ ಸಂದೇಶಗಳು, ಹಳೆಯ ಬಹಿಷ್ಕಾರದ ಪತ್ರ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಬೇಕು. ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸಿದವರು ಮತ್ತು ಸಂದೇಶಗಳನ್ನು ಉದ್ದೇಶಪೂರ್ವಕವಾಗಿ ಹಂಚಿದವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ವಿಜಯಕುಮಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.