SK Home Ad
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್!

ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್!

0
3

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಹು-ಧಾ ಮಹಾನಗರದ ಮೇಯರ್, ಉಪ ಮೇಯರ್ ಆಡಳಿತಾವಧಿ ಇಂದಿಗೆ ಕೊನೆಗೊಳ್ಳಲಿದ್ದು, 25ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆಗೆ ಜು. 4ರಂದು ಬೆಳಗ್ಗೆ 9 ಗಂಟೆಗೆ ಮುಹೂರ್ತ ಫಿಕ್ಸ್ ಆಗಿದೆ.

ನೂತನ ಮೇಯರ್, ಉಪ ಮೇಯರ್ ಗಾದಿಗೇರಲು ಮುಸುಕಿನ ಗುದ್ದಾಟ ನಡೆದಿದ್ದು, ಮೇಯರ್ ಸ್ಥಾನಕ್ಕೆ ಚಂದ್ರಿಕಾ ಮೇಸ್ತ್ರಿ, ಉಪಮೇಯರ್ ಸ್ಥಾನಕ್ಕೆ ನೀಲವ್ವ ಅರವಳದ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಈ ಬಾರಿ ಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದರೆ ಆಡಳಿತಾರೂಢ ಬಿಜೆಪಿಯಲ್ಲಿ ಯಾವುದೇ ಎಸ್‌ಸಿ ಮಹಿಳಾ ಸದಸ್ಯರು ಇಲ್ಲದಿರುವುದು ತಲೆನೋವಿಗೆ ಕಾರಣವಾಗಿದೆ.

ಮೇಯರ್ ರೇಸ್‌ನಲ್ಲಿರುವ 56ನೇ ವಾರ್ಡ್‌ನ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ ಇಬ್ಬರೂ ಎಸ್‌ಸಿ ವರ್ಗಕ್ಕೆ ಸೇರಿದವರಾದರೂ ಅವರು ಪಕ್ಷೇತರರು. ಇಬ್ಬರಿಗೂ ಬಿಜೆಪಿ ಟಿಕೆಟ್ ದೊರೆಯದ ಕಾರಣಕ್ಕೆ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಗೆಲುವಿನ ನಂತರ ಬಿಜೆಪಿಯನ್ನು ಬೆಂಬಲಿಸಿ, ಬಿಜೆಪಿಗರೆನ್ನಿಸಿದ್ದಾರೆ. ಹೀಗಾಗಿ ಪಕ್ಷೇತರರಿಗೆ ಮಣೆ ಹಾಕದೇ ಬಿಜೆಪಿಗೆ ವಿಧಿ ಇಲ್ಲದಂತಾಗಿದೆ.

ಹುಬ್ಬಳ್ಳಿಗೆ ಪಕ್ಕಾ: ಧಾರವಾಡದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸದಸ್ಯರು ಇಲ್ಲದಿರುವುದರಿಂದ ಹಾಗೂ 24ನೇ ಅವಧಿಯಲ್ಲಿ ಮೇಯರ್ ಸ್ಥಾನ ಧಾರವಾಡದ ಜ್ಯೋತಿ ಪಾಟೀಲ ಅವರ ಪಾಲಾಗಿದ್ದ ಕಾರಣ ಈ ಬಾರಿ ಹುಬ್ಬಳ್ಳಿಗೆ ಪಕ್ಕಾ ಆಗಿದೆ. ಅದರಲ್ಲೂ ದುರ್ಗಮ್ಮ ಬಿಜವಾಡ ಅವರು 23ನೇ ಅವಧಿಯಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಸಾಲಿನ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಅಧಿಕಾರ ಅನುಭವಿಸಿದ್ದರು. ಹೀಗಾಗಿ ಈವರೆಗೂ ಯಾವ ಅಧಿಕಾರವನ್ನೂ ಅನುಭವಿಸದ ಚಂದ್ರಿಕಾ ಮೇಸ್ತಿç ಅವರಿಗೆ ಮೇಯರ್ ಪಟ್ಟ ಕಟ್ಟಬಹುದು ಎಂದು ಬಿಜೆಪಿ ಪಾಳಯದಲ್ಲಿ ಅಂದಾಜಿಸಲಾಗುತ್ತಿದೆ.

ಲೆಕ್ಕಾಚಾರವೇ ಬೇರೆ: ಆದರೆ ನಾಯಕರ ಲೆಕ್ಕಾಚಾರವೇ ಬೇರೆ ಇದೆ. ಈ ಹಿಂದೆ 2012ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಚಂದ್ರಿಕಾ ಮೇಸ್ತ್ರಿ ಹಾಗೂ ಅವರ ಪತಿ ವೆಂಕಟೇಶ ಮೇಸ್ತ್ರಿ ಬಿಜೆಪಿಯನ್ನು ಬಿಟ್ಟು ಕೆಜೆಪಿ ಸೇರಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ವಿರುದ್ಧ ನಡೆದುಕೊಂಡಿದ್ದರು ಎಂಬ ಕಾರಣಕ್ಕೆ ಮೇಯರ್ ಹುದ್ದೆ ಚಂದ್ರಿಕಾ ಮೇಸ್ತ್ರಿ ಅವರ ಕೈ ತಪ್ಪಿ ದುರ್ಗಮ್ಮ ಬಿಜವಾಡ ಅವರಿಗೆ ಒಲಿದರೂ ಅಚ್ಚರಿ ಇಲ್ಲ.

ಇನ್ನು ಉಪಮೇಯರ್ ಸ್ಥಾನಕ್ಕೆ ಚಂದ್ರಕಲಾ ಕೊಟಬಾಗಿ, ಸುನೀತಾ ಮಾಳವದಕರ್, ಅನಿತಾ ಚಳಗೇರಿ ಹಾಗೂ ರತ್ನಾಬಾಯಿ ನಾಜರೆ ಅವರು ಹೆಸರು ರೇಸ್‌ನಲ್ಲಿದ್ದವು. ಆದರೆ ಇದು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಎಲ್ಲ ಮಹಿಳಾ ಸದಸ್ಯರೂ ಒಂದೊಂದು ಮೀಸಲಾತಿ ಹೊಂದಿದ್ದಾರೆ. ಈ ಪೈಕಿ ಯಾರನ್ನಾದರೂ ಉಪಮೇಯರ್ ಸ್ಥಾನಕ್ಕೇರಿಸಿದರೆ ಸಾಮಾನ್ಯ ವರ್ಗಕ್ಕೆ ಅನ್ಯಾಯವಾದಂತಾಗುತ್ತದೆ. ಹೀಗಾಗಿ ಸಾಮಾನ್ಯ ಮಹಿಳೆಗೇ ನೀಡಬೇಕು ಎಂಬುದು ಪಕ್ಷದ ವರಿಷ್ಠರ ಯೋಚನೆಯಾಗಿದೆಯಂತೆ. ವರಿಷ್ಠರ ತೀರ್ಮಾನದಂತೆ ಆಯ್ಕೆ ಪ್ರಕ್ರಿಯೆ ನಡೆದರೆ ಧಾರವಾಡದ ವಾರ್ಡ್ ನಂ. 26ರ ನೀಲವ್ವ ಅರವಳದ ಅವರಿಗೆ ಈ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳು: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂ. 20ರ ಸದಸ್ಯೆ ಕವಿತಾ ದಾನಪ್ಪ ಕಬ್ಬೇರ್ ಹಾಗೂ ಉಪ ಮಹಾಪೌರರ ಸ್ಥಾನಕ್ಕೆ ವಾರ್ಡ್ ನಂ. 6ರ ದಿಲ್‌ಶಾದ್ ಬೇಗಂ ನದಾಫ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಜು. 4ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆಯೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಪರಿಶೀಲನೆ, ವಾಪಸ್ ಪಡೆಯುವ ಪ್ರಕ್ರಿಯೆಯ ಬಳಿಕ ಮಧ್ಯಾಹ್ನ 1 ಗಂಟೆಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನೆರವೇರಲಿದೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.