ದಾವಣಗೆರೆ: ರಾಜ್ಯದಲ್ಲಿ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್(ವಿಬಿ-ಜಿ ರಾಮ ಜಿ) ಹೊಸ ಯೋಜನೆ ಬುಧವಾರದಿಂದ ಜಾರಿಗೆ ಬಂದಿತು. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಹಿಂದಿನ 90:10 ಹಣಕಾಸು ಅನುಪಾತವನ್ನು ಪುನಃ ಜಾರಿಗೊಳಿಸಬೇಕು ಎಂದು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ರಾಜ್ಯ ಸರ್ಕಾರ ನಿಲುವು ಸ್ಪಷ್ಟಪಡಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಜಿಲ್ಲಾ ಪಂಚಾಯ್ತಿಯ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನರೇಗಾ ಯೋಜನೆ ಕಳೆದ 20 ವರ್ಷಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, 2006ರಿಂದ ಇಲ್ಲಿವರೆಗೆ ಸುಮಾರು 61 ಸಾವಿರ ಕೋಟಿ ವೆಚ್ಚ ಮಾಡಿ 182 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಲಕ್ಷಾಂತರ ಗ್ರಾಮೀಣ ಜನರಿಗೆ ಉದ್ಯೋಗ ದೊರೆತಿದ್ದು, ಸಾವಿರಾರು ಅಭಿವೃದ್ಧಿ ಕಾಮಗಾರಿಗಳು ನಿರ್ಮಾಣವಾಗಿವೆ ಎಂದು ಸಚಿವರು ವಿವರಿಸಿದರು.
ಕೇಂದ್ರ ಸರ್ಕಾರ ಈಗ ಮನರೇಗಾ ಯೋಜನೆಯಲ್ಲಿ ಬದಲಾವಣೆ ತಂದು ವಿಬಿ-ಜಿ ರಾಮ್ ಜಿ ಹೊಸ ಮಾದರಿಯ ಯೋಜನೆ ಜಾರಿಗೊಳಿಸುತ್ತಿದೆ. ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಪಾಲುದಾರಿಕೆ ಅನುಪಾತ 90:10 ಆಗಿತ್ತು. ಕಾರ್ಮಿಕರ ವೇತನವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತಿತ್ತು ಹಾಗೂ ಕಾಮಗಾರಿಗಳ ಸಾಮಗ್ರಿ ವೆಚ್ಚದಲ್ಲಿ ಕೇಂದ್ರದ ಪಾಲು ಶೇ. 75 ಮತ್ತು ರಾಜ್ಯದ ಪಾಲು ಶೇ. 25 ಇತ್ತು ಎಂದು ತಿಳಿಸಿದರು.
ಆದರೆ ಹೊಸ ವ್ಯವಸ್ಥೆಯಲ್ಲಿ ಹಣಕಾಸು ಪಾಲುದಾರಿಕೆಯನ್ನು 60:40ಕ್ಕೆ ಬದಲಾಯಿಸಿರುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಕರ್ನಾಟಕಕ್ಕೆ ಈ ವರ್ಷ 5,509 ಕೋಟಿ ಅನುದಾನ ಹಂಚಿಕೆಯಾಗಿದ್ದರೂ, ರಾಜ್ಯ ಸರ್ಕಾರವು ಸುಮಾರು 3,200 ಕೋಟಿ ತನ್ನ ಪಾಲಿನ ಹಣ ಒದಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸುಗ್ಗಿ ಅವಧಿಯಲ್ಲಿ 60 ದಿನಗಳ ಕಾಲ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ನಿರ್ಬಂಧ ವಿಧಿಸಿರುವ ಕ್ರಮವೂ ಅವೈಜ್ಞಾನಿಕವಾಗಿದೆ. ಕೃಷಿ ಕ್ಷೇತ್ರದಲ್ಲಿ ಈಗಾಗಲೇ ಯಾಂತ್ರೀಕರಣ ಹೆಚ್ಚಾಗಿದ್ದು, ಈ ಅವಧಿಯಲ್ಲಿ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗಾವಕಾಶ ಕಳೆದುಹೋಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಮನರೇಗಾ ಅಡಿಯಲ್ಲಿ ಇದುವರೆಗೆ ಇದ್ದ 267 ವಿವಿಧ ಕಾಮಗಾರಿಗಳಲ್ಲಿ 160 ಕಾಮಗಾರಿಗಳನ್ನು ಮಾತ್ರ ಮುಂದುವರಿಸಲಾಗಿದ್ದು, 107 ಕಾಮಗಾರಿಗಳನ್ನು ಕೈಬಿಡಲಾಗಿದೆ. ರೈತರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಕಾಮಗಾರಿಗಳು ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಮತ್ತೆ ಯೋಜನೆಗೆ ಸೇರಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.




















