SK Home Ad
Home ಸುದ್ದಿ ರಾಜ್ಯ ಬಂಡಿಪುರ, ನಾಗರಹೊಳೆ ಸಫಾರಿ ಪುನಾರಂಭಕ್ಕೆ ಡಿ.ಕೆ. ಶಿ ಗ್ರೀನ್ ಸಿಗ್ನಲ್

ಬಂಡಿಪುರ, ನಾಗರಹೊಳೆ ಸಫಾರಿ ಪುನಾರಂಭಕ್ಕೆ ಡಿ.ಕೆ. ಶಿ ಗ್ರೀನ್ ಸಿಗ್ನಲ್

0
65

ಬೆಂಗಳೂರು : ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸಫಾರಿ ಹಾಗೂ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಾರಂಭಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಈ ಸೂಚನೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: SIR ಪ್ರಕ್ರಿಯೆಗೆ ನೆರವಾಗಲು ಶಾಶ್ವತ ನಿವಾಸ ಪ್ರಮಾಣಪತ್ರ: CM

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, ಬಂಡಿಪುರ ಮತ್ತು ನಾಗರಹೊಳೆ ಪರಿಸರ ಪ್ರವಾಸೋದ್ಯಮ ಹಾಗೂ ಸಫಾರಿ ಪ್ರದೇಶಗಳಲ್ಲಿ ಹುಲಿಗಳು ಮತ್ತು ಚಿರತೆಗಳ ಸಾಂದ್ರತೆ ಹೆಚ್ಚಿರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸುರಕ್ಷತೆಗೆ ಮೊದಲ ಆದ್ಯತೆ : ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಬಂಡಿಪುರ ಮತ್ತು ನಾಗರಹೊಳೆ ಸಫಾರಿ ವಲಯಗಳಲ್ಲಿ ಹುಲಿಗಳು ಮತ್ತು ಚಿರತೆಗಳ ಸಾಂದ್ರತೆಯು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರದೇಶಗಳಿಗಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಕಠಿಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಮತದಾರರಲ್ಲದವರಿಗೆ ಗ್ಯಾರಂಟಿ ಏಕೆ?‌ ಸಿಎಂ ಪ್ರಶ್ನೆ

ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಾರಂಭಿಸಲು ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ಕುರಿತು ಚರ್ಚೆ : ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತ ವಿಷಯವೂ ಚರ್ಚೆಗೆ ಬಂದಿತು. ಯೋಜನೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟುಕೊಂಡು ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ತಕರಾರು ಸಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: SIR: ಧಾರವಾಡ ಡಿಸಿ ಜೊತೆ ಸಂಯುಕ್ತ ಕರ್ನಾಟಕ ಅರ್ಥಪೂರ್ಣ ಫೋನ್ ಇನ್

ಈ ಹಿನ್ನೆಲೆಯಲ್ಲಿ ಉದ್ಭವಿಸಿರುವ ತಾಂತ್ರಿಕ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅಪಾಯಕಾರಿಯಾದ ಮರಗಳ ತೆರವಿಗೆ ಆದೇಶ : ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಪಾಯಕಾರಿಯಾಗಿರುವ ಮರಗಳು ಹಾಗೂ ಕೊಂಬೆಗಳನ್ನು ಗುರುತಿಸಿ, ಅವುಗಳ ತೆರವಿಗೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನಾಡಿನ ಹಿರಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನಿಧನ

ಸಭೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ರಾಯಭಾರಿಯಾಗಿರುವ ಅನಿಲ್ ಕುಂಬ್ಳೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.