SK Home Ad
Home ಸುದ್ದಿ ದೇಶ ಆನೆಯ ನೋವಿಗೆ ಬ್ರೇಕ್: ವನತಾರಾದಲ್ಲಿ ಮನಿಕಿ ನರಕಯಾತನೆಗೆ ಮುಕ್ತಿ

ಆನೆಯ ನೋವಿಗೆ ಬ್ರೇಕ್: ವನತಾರಾದಲ್ಲಿ ಮನಿಕಿ ನರಕಯಾತನೆಗೆ ಮುಕ್ತಿ

0
43

ಜಾಮ್‌ನಗರ: ಮನಿಕಿ ಎಂಬ ಹೆಣ್ಣಾನೆ ಈ ಭೂಮಿಯ ಮೇಲೆ ಬರೋಬ್ಬರಿ 48 ವರ್ಷಗಳನ್ನು ಕಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವಳಿಗೆ ಪ್ರತಿಯೊಂದು ಹೆಜ್ಜೆಯೂ ಅತ್ಯಂತ ಕಷ್ಟದಾಯಕವಾಗಿತ್ತು. ಅವಳ ಎಡ ಮುಂಗಾಲಿನಲ್ಲಿದ್ದ ಹಳೆಯ ಗಾಯ ವ್ರಣವಾಗಿ ಅವಳ ನಡಿಗೆ ಮತ್ತು ಚಲನವಲನಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿತ್ತು. ಇದರೊಂದಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು, ಗಾಯಗಳ ಸೋಂಕು, ಒಂದು ಕಣ್ಣಿನ ದೃಷ್ಟಿ ದೋಷ, ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು) ಮತ್ತು ಕ್ಷೀಣಿಸಿದ ಒಟ್ಟಾರೆ ದೈಹಿಕ ಆರೋಗ್ಯದ ಸ್ಥಿತಿಯು ಮನಿಕಿಯ ಯಾತನೆಯನ್ನು ಮತ್ತಷ್ಟು ತೀವ್ರಗೊಳಿಸಿತ್ತು.

ಚಿಕಿತ್ಸೆಗಾಗಿ ಅಸ್ಸಾಂನ ಹೆದ್ದಾರಿಯೊಂದರಲ್ಲಿ ಮನಿಕಿ ನೋವಿನಿಂದ ಕುಂಟುತ್ತಾ ಸಾಗುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವಳ ದುಃಸ್ಥಿತಿ ಸಾರ್ವಜನಿಕರ ಗಮನಕ್ಕೆ ಬಂದಿತು. ಈ ದೃಶ್ಯಗಳು ದೇಶಾದ್ಯಂತ ಜನರ ಮನಸ್ಸನ್ನು ಕಲಕಿತ್ತು. ನಾಗರಿಕರು, ಪ್ರಾಣಿ ಪ್ರಿಯ ಕಾರ್ಯಕರ್ತರು ಒಟ್ಟಾಗಿ ಆನೆಯ ಆರೈಕೆಗಾಗಿ ತುರ್ತು ನೆರವು ಕೋರಿದರು. ಸಹಿ ಸಂಗ್ರಹಣೆಯ ಅಭಿಯಾನಗಳು ನಡೆದವು, ಮನವಿಗಳನ್ನು ಸಲ್ಲಿಸಲಾಯಿತು.

ಮನಿಕಿ ಆನೆಗೆ ಹೆಚ್ಚಿನ ಚಿಕಿತ್ಸೆ ಮತ್ತು ಸುದೀರ್ಘ ಆರೈಕೆಯ ಅಗತ್ಯವಿದೆ ಎಂಬುದನ್ನು ಮನಗಂಡ ಮಾಲೀಕರಾದ ರುಚಿ ಚೇತಿಯಾ ಅವರು, ಸುಪ್ರೀಂ ಕೋರ್ಟ್ ನೇಮಿಸಿದ ವನ್ಯಜೀವಿಗಳ ರಕ್ಷಣೆ ಮತ್ತು ಆರೈಕೆ ಸಮಿತಿಗೆ ಪತ್ರ ಬರೆದರು. ಸುಧಾರಿತ ಚಿಕಿತ್ಸೆ ಮತ್ತು ದೀರ್ಘಕಾಲೀನ ಆರೈಕೆಗಾಗಿ ಆನೆಯನ್ನು ‘ವನತಾರಾ’ಕ್ಕೆ ವರ್ಗಾಯಿಸುವಂತೆ ವಿನಂತಿಸಿದರು. ಸಮಿತಿ ಹಾಗೂ ಅಸ್ಸಾಂ ಮತ್ತು ಗುಜರಾತ್ ಸರ್ಕಾರಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ನಂತರ, ವನತಾರಾ ಸಂಸ್ಥೆಯು ಈಗ ಮನಿಕಿಯನ್ನು ಸುರಕ್ಷಿತವಾಗಿ ಜಾಮ್‌ ನಗರಕ್ಕೆ ಕರೆತಂದಿದೆ. ವನತಾರಾದಲ್ಲಿ ಮನಿಕಿಗೆ ಸುಧಾರಿತ ಆಸ್ಪತ್ರೆ ಆರೈಕೆ, ನಿರಂತರ ಚಿಕಿತ್ಸೆ ಮತ್ತು ಅವಳ ಆರಾಮ ಹಾಗೂ ಯೋಗಕ್ಷೇಮಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ಶಾಶ್ವತ ಆಶ್ರಯ ತಾಣ ಸಿಗಲಿದೆ.

ಈ ಕುರಿತು ವನತಾರಾ ವಕ್ತಾರರು ಮಾತನಾಡಿ, “ಮನಿಕಿಯ ಆರೋಗ್ಯ ವರದಿಯ ಪ್ರಕಾರ, ಅವಳಿಗೆ ಸಂರಕ್ಷಿತ ಮತ್ತು ವಿಶೇಷ ಆರೈಕೆಯ ಪರಿಸರದಲ್ಲಿ ಸಮಗ್ರ ಪಶುವೈದ್ಯಕೀಯದ ಅಗತ್ಯವಿದೆ. ಅವಳ ಅಸಹಜ ನಡಿಗೆ, ಕುಂಟುವಿಕೆ, ನಿರ್ಜಲೀಕರಣ, ಕ್ಷೀಣಿಸಿದ ದೈಹಿಕ ಸ್ಥಿತಿ, ಗಾಯಗಳ ಸೋಂಕು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಾಗಿ ವ್ಯವಸ್ಥಿತ ದೀರ್ಘಕಾಲೀನ ಚಿಕಿತ್ಸಾ ಯೋಜನೆಯು ಅತ್ಯಗತ್ಯವಾಗಿದೆ. ಔಷಧೋಪಚಾರ, ಹೈಡ್ರೋಥೆರಪಿ (ಜಲ ಚಿಕಿತ್ಸೆ) ಮತ್ತು ಅಕ್ಯುಪಂಕ್ಚರ್ ಮೂಲಕ ಅವಳ ನೋವನ್ನು ಉಪಶಮನಗೊಳಿಸುವುದು, ಗಾಯದ ಆರೈಕೆ ಮತ್ತು ಪೌಷ್ಟಿಕಾಹಾರದ ಪೂರೈಕೆ ತಕ್ಷಣದ ಆದ್ಯತೆಗಳಾಗಿವೆ. ಸಕಾಲಿಕವಾಗಿ ಮಧ್ಯಪ್ರವೇಶಿಸಿದ ಅಧಿಕಾರಿಗಳಿಗೆ ಮತ್ತು ಮನಿಕಿಗೆ ಅಗತ್ಯವಿರುವ ತುರ್ತು ಆರೈಕೆಗಾಗಿ ವನತಾರಾಕ್ಕೆ ವರ್ಗಾಯಿಸಲು ಸೂಕ್ತ ನಿರ್ಧಾರ ಕೈಗೊಂಡ ರುಚಿ ಚೇತಿಯಾ ಅವರಿಗೆ ನಾವು ಕೃತಜ್ಞರಾಗಿದ್ದೇವೆ,” ಎಂದು ವಿವರಿಸಿದರು.

ವನತಾರಾದಲ್ಲಿ ಮನಿಕಿಯ ಚೇತರಿಕೆ ಕೇವಲ ಔಷಧಗಳಿಗೆ ಮಾತ್ರ ಸೀಮಿತವಾಗಿಲ್ಲ. ಗಾಯಗೊಂಡ ಅವಳ ಕಾಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮೃದುವಾದ ಮಣ್ಣು ಮತ್ತು ನೈಸರ್ಗಿಕ ನೆಲದ ವ್ಯವಸ್ಥೆ, ಅಂಗಾಂಗಗಳ ಮೇಲಿನ ಭಾರವನ್ನು ತಗ್ಗಿಸಲು ನೈಸರ್ಗಿಕ ಕೊಳಗಳ ಸೌಲಭ್ಯ, ಸ್ವಾಭಾವಿಕವಾಗಿ ಆಹಾರ ಹುಡುಕುವ ಮುಕ್ತ ಅವಕಾಶ ಮತ್ತು ಇತರ ಆನೆಗಳ ಒಡನಾಟದೊಂದಿಗೆ ಅವಳಿಗೆ ಪ್ರತಿದಿನ ಅಗತ್ಯವಿರುವ ಕಾಳಜಿ, ಆರಾಮ ಮತ್ತು ಘನತೆಯ ಜೀವನ ಸಿಗಲಿದೆ.

ಮನಿಕಿಯ ರಕ್ಷಣೆಯು ನಮಗೆ ಒಂದು ವಿಷಯವನ್ನು ನೆನಪಿಸುತ್ತದೆ. ಸಾಮೂಹಿಕ ಧ್ವನಿ, ಜವಾಬ್ದಾರಿಯುತ ನಿರ್ಧಾರಗಳು ಮತ್ತು ಸಂಘಟಿತ ಪ್ರಯತ್ನಗಳು ಒಂದು ಪ್ರಾಣಿಯ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲವು. ಅಗತ್ಯ ಬೆಂಬಲ ಮತ್ತು ಅನುಮತಿಗಳೊಂದಿಗೆ, ಮನಿಕಿಗೆ ಈಗ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಭವಿಷ್ಯದ ಅವಕಾಶ ಸಿಕ್ಕಿದೆ. ಮನಿಕಿಗೆ ಈಗ ನೋವಿನ ನಡಿಗೆಯ ದಿನಗಳು ಮುಗಿದಿವೆ. ವನತಾರಾದಲ್ಲಿ ಅವಳು ಗುಣಮುಖಳಾಗುತ್ತಿದ್ದಾಳೆ. ಆನೆಯ ಜೀವನದ ಹೊಸ ಅಧ್ಯಾಯ ಆರಂಭವಾಗಿದೆ.