SK Home Ad
Home ಕ್ರೀಡೆ ISSF ವಿಶ್ವ ಜೂನಿಯರ್ ಶೂಟಿಂಗ್: ಹುಬ್ಬಳ್ಳಿಯ ಐಶ್ವರ್ಯಾಗೆ ಬೆಳ್ಳಿ ಪದಕ

ISSF ವಿಶ್ವ ಜೂನಿಯರ್ ಶೂಟಿಂಗ್: ಹುಬ್ಬಳ್ಳಿಯ ಐಶ್ವರ್ಯಾಗೆ ಬೆಳ್ಳಿ ಪದಕ

0
54

ಜರ್ಮನಿಯಲ್ಲಿ ಕರ್ನಾಟಕದ ಕುವರಿ ಸಾಧನೆ:ವಿಶ್ವ ಜೂನಿಯರ್ ಶೂಟಿಂಗ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಕರ್ನಾಟಕದ ಐಶ್ವರ್ಯಾ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ.

ಹುಬ್ಬಳ್ಳಿ/ಜರ್ಮನಿ: ಜರ್ಮನಿಯ ಸುಲ್ ನಗರದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ (ISSF) ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಹುಬ್ಬಳ್ಳಿಯ ಯುವ ಶೂಟರ್ ಐಶ್ವರ್ಯಾ ರವಿಚಂದ್ರ ಬಾಲೇಹೊಸೂರ್ ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. 50 ಮೀಟರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಐಶ್ವರ್ಯಾ, ಅತ್ಯಂತ ರೋಚಕ ಫೈನಲ್‌ನಲ್ಲಿ ಕೂದಲೆಳೆ ಅಂತರದಿಂದ ಚಿನ್ನದ ಪದಕ ಕಳೆದುಕೊಂಡರು.

ಫೈನಲ್‌ನ ಆರನೇ ಹಾಗೂ ಅಂತಿಮ ಸುತ್ತಿನ ಅಂತ್ಯಕ್ಕೆ ಐಶ್ವರ್ಯಾ ಮತ್ತು ರಷ್ಯಾದ ತಟಸ್ಥ ಅಥ್ಲೀಟ್ ಸೋಫಿಯಾ ಸ್ಮೆಟಾಂಕಿನಾ ತಲಾ 540 ಅಂಕಗಳನ್ನು ಗಳಿಸಿ ಸಮಬಲ ಸಾಧಿಸಿದ್ದರು. ಆದರೆ, ಇನ್ನರ್-10 ಶಾಟ್‌ಗಳ ಲೆಕ್ಕಾಚಾರದಲ್ಲಿ ಸೋಫಿಯಾ 12 ಬಾರಿ ನಿಖರ ಗುರಿ ತಲುಪಿದ್ದರೆ, ಐಶ್ವರ್ಯಾ 11 ಬಾರಿ ಮಾತ್ರ ಯಶಸ್ವಿಯಾಗಿದ್ದರು. ಪರಿಣಾಮ ಕೇವಲ ಒಂದು ಇನ್ನರ್-10 ಶಾಟ್ ಅಂತರದಿಂದ ಐಶ್ವರ್ಯಾಗೆ ಬೆಳ್ಳಿ ಪದಕ ತೃಪ್ತಿಪಡಬೇಕಾಯಿತು. ಮಂಗೋಲಿಯಾದ ಅರಿಯುಂಜಯ ಅಮರಬಯಾಸ್ಗಲನ್ ಕಂಚಿನ ಪದಕ ಜಯಿಸಿದರು.

ಇದನ್ನೂ ಓದಿ: ಧರ್ಮಸ್ಥಳ: ಅಪಪ್ರಚಾರಕ್ಕೆ ಪೂರ್ಣವಿರಾಮ – ವಿಜಯೇಂದ್ರ ಪ್ರತಿಕ್ರಿಯೆ

ಸ್ಪರ್ಧೆಯ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಐಶ್ವರ್ಯಾ, ಮೊದಲ ಸುತ್ತಿನಲ್ಲೇ 90 ಅಂಕ ಗಳಿಸಿ ಗಮನ ಸೆಳೆದರು. ಬಳಿಕದ ಸುತ್ತುಗಳಲ್ಲೂ ಸತತವಾಗಿ 90ಕ್ಕೂ ಹೆಚ್ಚು ಅಂಕ ಗಳಿಸುವ ಮೂಲಕ ಐದನೇ ಸುತ್ತಿನವರೆಗೂ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಭಾರತದ ಇತರ ಸ್ಪರ್ಧಿಗಳಾದ ಪಾರ್ಶಿನಾ ಗುಪ್ತಾ ನಾಲ್ಕನೇ, ಸಂಸ್ಕೃತಿ ಬಾನಾ ಎಂಟನೇ ಹಾಗೂ ಸೇಜಲ್ ಕಾಂಬ್ಳೆ 13ನೇ ಸ್ಥಾನ ಪಡೆದರು.

ಈ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಇದುವರೆಗೆ 7 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಸೇರಿದಂತೆ ಒಟ್ಟು 25 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದನ್ನೂ ಓದಿ: ತಾಂತ್ರಿಕ ನಿರ್ವಹಣೆ ಹಿನ್ನೆಲೆ: ಇಂದು ಇಡೀ ದಿನ KEA ಹೆಲ್ಪ್‌ಲೈನ್ ಬಂದ್

ಕಳೆದ ಫೆಬ್ರವರಿಯಲ್ಲಿ 18ನೇ ವಸಂತಕ್ಕೆ ಕಾಲಿಟ್ಟ ಐಶ್ವರ್ಯಾಗೆ ಶೂಟಿಂಗ್ ಕೌಶಲ್ಯ ಕುಟುಂಬದಿಂದಲೇ ಬಂದಿದೆ. ಅವರ ತಂದೆ ರವಿಚಂದ್ರ ಬಾಲೇಹೊಸೂರ್ ರಾಷ್ಟ್ರೀಯ ಮಟ್ಟದಲ್ಲಿ ‘ಸರ್ವಿಸಸ್’ ತಂಡವನ್ನು ಪ್ರತಿನಿಧಿಸಿದ್ದ ಖ್ಯಾತ ಶೂಟರ್ ಆಗಿದ್ದಾರೆ. ತಂದೆ ಹಾಗೂ ಚಿಕ್ಕಪ್ಪ ಶಿವಾನಂದ ನಡೆಸುತ್ತಿರುವ ಹುಬ್ಬಳ್ಳಿಯ ಶೂಟಿಂಗ್ ಅಕಾಡೆಮಿಯಲ್ಲೇ ಐಶ್ವರ್ಯಾ ತರಬೇತಿ ಪಡೆದಿದ್ದಾರೆ.

2023ರಲ್ಲಿ ಕೇವಲ 15ನೇ ವಯಸ್ಸಿನಲ್ಲಿ ಭೋಪಾಲ್‌ನಲ್ಲಿ ನಡೆದ ಸೀನಿಯರ್ ನ್ಯಾಷನಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಐಶ್ವರ್ಯಾ, ಇದೀಗ ವಿಶ್ವ ವೇದಿಕೆಯಲ್ಲಿ ಬೆಳ್ಳಿ ಗೆದ್ದು ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.