SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಧರ್ಮಸ್ಥಳ: ಅಪಪ್ರಚಾರಕ್ಕೆ ಪೂರ್ಣವಿರಾಮ – ವಿಜಯೇಂದ್ರ ಪ್ರತಿಕ್ರಿಯೆ

ಧರ್ಮಸ್ಥಳ: ಅಪಪ್ರಚಾರಕ್ಕೆ ಪೂರ್ಣವಿರಾಮ – ವಿಜಯೇಂದ್ರ ಪ್ರತಿಕ್ರಿಯೆ

0
100

ಧರ್ಮಸ್ಥಳ: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ತಮಗೆ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ವಿರುದ್ಧ ಕೆಲವು ವಲಯಗಳಿಂದ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಒಬ್ಬ ಸಂಸದ, ಎಂಟು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಪ್ರಸಂಗವು ತಮಗೂ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೂ ತೀವ್ರ ಆಘಾತ ಮತ್ತು ನೋವು ತಂದಿದೆ ಎಂದು ವಿಜಯೇಂದ್ರ ಹೇಳಿದರು. “ನಾನು ಭಾವನಾತ್ಮಕ ವ್ಯಕ್ತಿಯಾಗಿರುವುದರಿಂದ ಸತ್ಯಾಸತ್ಯತೆ ಹೊರಬರಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ನಿರ್ಧರಿಸಿದ್ದೆ. ಆದರೆ, ಪಕ್ಷದ ಹಿರಿಯ ನಾಯಕರು ಈ ವಿಚಾರವನ್ನು ಪಕ್ಷದ ಒಳಗಡೆಯೇ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಇಂದು ಕೇವಲ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಬಂದಿದ್ದೇನೆ” ಎಂದು ತಿಳಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ತಮ್ಮ ಸಂಬಂಧದ ಬಗ್ಗೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, “ನನಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧವಿಲ್ಲ. ಅವರ ಪರವಾಗಿ ನಾನು ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಹೇಳಿದರು.

“ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಮತ್ತು ಪ್ರಸ್ತುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಆ ಹುದ್ದೆಗೆ ಸಲ್ಲಬೇಕಾದ ಗೌರವವನ್ನಷ್ಟೇ ನಾನು ನೀಡುತ್ತಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೂ ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯದು ಮಾಡಲಿ” ಎಂದು ವಿಜಯೇಂದ್ರ ಮಾರ್ಮಿಕವಾಗಿ ನುಡಿದರು.