SK Home Ad
Home ನಮ್ಮ ಜಿಲ್ಲೆ ಚಾಮರಾಜನಗರ ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿಬಾಂಬ್ ಬೆದರಿಕೆ

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿಬಾಂಬ್ ಬೆದರಿಕೆ

0
65

ಚಾಮರಾಜನಗರ: ಚಾಮರಾಜನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬುಧವಾರ ಸಂಜೆ 4 ಗಂಟೆಯ ಸಮಯದಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸಾರ್ವಜನಿಕರು ನ್ಯಾಯಾಲಯದಿಂದ ಹೊರ ಬಂದ ಹಿನ್ನಲೆಯಲ್ಲಿ ನ್ಯಾಯಾಲಯದ ಕಾರ್ಯ-ಕಲಾಪಗಳು ಸ್ಥಗಿತಗೊಂಡಿತು.

ತೀವ್ರ ಶೋಧ: ನ್ಯಾಯಾಲಯದ ಅಧಿಕಾರಿಗಳ ಗಮನಕ್ಕೆ ಬೆದರಿಕೆ ಇ-ಮೇಲ್ ಬಂದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದ ಜಿಲ್ಲಾ ಪೊಲೀಸರು, ಬಾಂಬ್ ನಿಗ್ರಹ ದಳ ಮತ್ತು ಶ್ವಾನದಳದ ಸಿಬ್ಬಂದಿ ನ್ಯಾಯಾಲಯದ ಕಟ್ಟಡಕ್ಕೆ ಆಗಮಿಸಿ ತೀವ್ರ ಶೋಧ ನಡೆಸಿದರು. ಬಳಿಕ ಯಾವುದೇ ಅನುಮಾಸ್ಪದವಾದ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಈ ಸಂಬಂಧ ‘ಸಂಯುಕ್ತ ಕರ್ನಾಟಕ’ ನೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಮಾತನಾಡಿ, ಕಸಬ್ ಎಂಬ ಹೆಸರಿನ ಇ-ಮೇಲ್ ಐಡಿಯಿಂದ ನ್ಯಾಯಾಲಯದ ಅಧಿಕೃತ ಇ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಶೋಧನೆ ನಡೆಸಲಾಗಿದೆ. ಯಾವುದೇ ಅನುಮಾಸ್ಪಾದ ವಸ್ತುಗಳು ಪತ್ತೆಯಾಗಿಲ್ಲ. ಯಾರೂ ಆತಂಕಪಡಬಾರದು ಎಂದು ತಿಳಿಸಿದರು.