SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಮಾಹಿತಿ: ಅಯೋಧ್ಯೆಯ ರಾಮ ಮಂದಿರ ಗುರಿಯಾಗಿತ್ತೇ?

ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಮಾಹಿತಿ: ಅಯೋಧ್ಯೆಯ ರಾಮ ಮಂದಿರ ಗುರಿಯಾಗಿತ್ತೇ?

0
124

ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಮಂಗಳವಾರ ಬಂಧಿಸಲ್ಪಟ್ಟಿರುವ 20 ವರ್ಷದ ಶಂಕಿತ ವ್ಯಕ್ತಿಯ ವಿಚಾರಣೆ ವೇಳೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲ್ಪಟ್ಟಿರುವ ಉತ್ತರ ಪ್ರದೇಶ ಮೂಲದ ಸುಹೇಲ್ ಎಂಬಾತನನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಹಲವು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಶಂಕಿತನು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಆದರೆ, ಈ ಕುರಿತಂತೆ ತನಿಖೆ ಇನ್ನೂ ಮುಂದುವರಿದಿದ್ದು, ಅಧಿಕೃತ ದೃಢೀಕರಣ ಮತ್ತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ

ಬಂಧಿತ ಸುಹೇಲ್ ಹರಿಹರ ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯೊಂದರಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಸಾಮಾನ್ಯ ಕಾರ್ಮಿಕನಂತೆ ವರ್ತಿಸಿ ಅಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಚಟುವಟಿಕೆಗಳ ಮೇಲೆ ಅನುಮಾನಗೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯ ಭಾಗವಾಗಿ ಆರೋಪಿಯ ಮೊಬೈಲ್ ಫೋನ್‌ನ್ನು ಪರಿಶೀಲಿಸಿದಾಗ, ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯ ಸುಳಿವುಗಳು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆ ‘ರಾಣಾ ಬಾಯ್’ ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಗ್ನಿ ಅವಘಡ: ಉದ್ಯೋಗ ಭವನ ಬಳಿ 200ಕ್ಕೂ ಅಧಿಕ ಶೆಡ್‌ಗಳು ಭಸ್ಮ!

ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ಶಂಕೆಯಿರುವ ಕೆಲವು ರಹಸ್ಯ ಗುಂಪುಗಳಾದ ‘MEMON & JUTTU-333’ ಹಾಗೂ ‘RANABHAI 333’ ಗುಂಪುಗಳಲ್ಲಿ ಆತ ಸಕ್ರಿಯನಾಗಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಆರೋಪಿಯ ಮೊಬೈಲ್ ಗ್ಯಾಲರಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ತೆಗೆಸಿಕೊಂಡಿರುವ ಹಲವು ಫೋಟೋಗಳು ಪತ್ತೆಯಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಸಂಚು ರೂಪಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿಚಾರಣೆ ಮತ್ತು ತನಿಖೆಗಾಗಿ ಆರೋಪಿಯನ್ನು ಮಂಗಳವಾರ ಸಂಜೆ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.