ಕೊಪ್ಪಳ: ರಾಜ್ಯದಲ್ಲಿ 2028ಕ್ಕೆ ಜನ ಶಕ್ತಿ ಮತ್ತು ಹಣ ಶಕ್ತಿಯ ನಡುವೆ ಚುನಾವಣೆ ನಡೆಯುತ್ತದೆ. ಹಣದಿಂದ ಕಾಂಗ್ರೆಸನ್ನು ಸೋಲಿಸಲು ಸಾಧ್ಯವಿಲ್ಲ. ಜನಶಕ್ತಿಯಿಂದಲೇ ಸೋಲಿಸಲು ಸಾಧ್ಯ. ಬಿಜೆಪಿ ಪ್ರತಿಪಕ್ಷವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕೊಪ್ಪಳದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆ ನನಗೆ ಬಹಳ ಹತ್ತಿರ ನಾವು ಚಿಕ್ಕಂದಿನಿಂದಲೇ ಕೊಪ್ಪಳದ ಮಠಕ್ಕೆ ಹಲವಾರು ಬಾರಿ ಬಂದಿದ್ದೇನೆ. ನಮ್ಮ ತಾಯಿ ಈ ಮಠದ ಭಕ್ತಳು. ಇಲ್ಲಿಯ ಜನರು ಮುಗ್ಧರು ಮತ್ತು ಶ್ರಮಜೀವಿಗಳು ಆದರೆ, ಬಹಳಷ್ಟು ಅವಕಾಶಗಳಿಂದ ವಂಚಿತ ಆಗಿರುವ ಬಹಳ ಬೃಹತ್ ಕೈಗಾರಿಕೆ ಮಿಲ್‌ಗಳು ಬಂದರೂ ಸ್ಥಳೀಯರ ಬದುಕು ದೊಡ್ಡ ಪ್ರಮಾಣದಲ್ಲಿ ಬದಲಾಗಿಲ್ಲ. ಇನ್ನೊಂದೆಡೆ ತುಂಗಭದ್ರಾ ಜಿಲ್ಲೆಯ ಸುತ್ತಲೂ ಹರಿದರೂ ಅದರ ಸದುಪಯೋಗ ಮಾಡಿಕೊಳ್ಳಲು ಯಶಸ್ವಿಯಾಗಿಲ್ಲ. ಹೀಗಾಗಿ ನೀರಾವರಿ, ಕೈಗಾರಿಕೆಯಿಂದ ವಂಚಿತವಾಗಿರುವ ಈ ಜಿಲ್ಲೆಗೆ ನ್ಯಾಯ ಕೊಡುವ ಸಣ್ಣ ಪ್ರಯತ್ನ ನಾನು ಮಾಡಿದ್ದೇನೆ. ಅದು ಈಗ ಫಲ ಕೊಡಲು ಆರಂಭಿಸಿದೆ ಎಂದರು.
ಬಿಜೆಪಿ ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳದೇ ರಾಜಕೀಯವಾಗಿಯೂ ವಂಚಿತವಾಗಿದೆ. ಹೀಗಾಗಿ ನಾಯಕತ್ವ ರಾಜ್ಯ ಮಟ್ಟದಲ್ಲಿ ಪ್ರಬಲವಾಗಿ ಬೆಳೆದರೆ ಆ ಭಾಗ ಆ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತದೆ. ಈ ಜಿಲ್ಲೆಯನ್ನು ಸಮಗ ಅಭಿವೃದ್ಧಿ ಮಾಡಿ ಸಾಮಾನ್ಯ ಜನರು ಉತ್ತಮ ಬದುಕು ನಡೆಸಲು ನಾವು ಅವಕಾಶ ಕಲ್ಪಿಸಬೇಕು ಅದಕ್ಕಾಗಿ ಅಧಿಕಾರ ಬೇಕು, ಅಧಿಕಾರಕ್ಕೆ ಬರಬೇಕೆಂದರೆ ಬಿಜೆಪಿ ಗೆಲ್ಲಬೇಕು. ರಾಜ್ಯದಲ್ಲಿ ನಮ್ಮ ಪಾಲು ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕು. ಅದಕ್ಕಾಗಿ ಬಿಜೆಪಿ ಗೆಲ್ಲಿಸಲು ನಾವೆಲ್ಲರೂ ಒಕ್ಕಟ್ಟಾಗಬೇಕು. ಕಳೆದ ಚುನಾವಣೆಗಳಲ್ಲಿ ನಮ್ಮ ಸ್ವಯಂಕೃತ ಅಪರಾಧಗಳನ್ನು ನಾವು ಮಾಡಿದ್ದೇವೆ. ಹೀಗಾಗಿ ಗೆಲ್ಲುವ ಅವಕಾಶ ಇದ್ದರೂ ಕೂಡ ನಾವು ಗುರಿ ಮುಟ್ಟಲು ಆಗಿಲ್ಲ. ಈಗ ಮತ್ತೆ ಅವಕಾಶ ಬಂದಿದೆ ಎಂದರು.
ಸಂಘಟನೆಗೆ ಆದ್ಯತೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಆಗಿರುವ ಘಟನೆ ದುರ್ದೈವ ಆ ರೀತಿ ಆಗಬಾರದು. ಆದರೆ, ಅದನ್ನೇ ಇಟ್ಟುಕೊಂಡು ಎಷ್ಟು ದಿನ ಇರುವುದು. ಹಿಂದೆ ಉಪ ಚುನಾವಣೆಗಳಲ್ಲಿ ಸಾಕಷ್ಟು ಬಾರಿ ಸೋಲಾಗಿದೆ. ಕಾಂಗ್ರೆಸ್ಸಿನಲ್ಲಿಯೂ ಆಗಿದೆ. ಅದನ್ನು ಎಲ್ಲಿ ತಪ್ಪಾಗಿದೆ ಎನ್ನುವುದರ ಬಗ್ಗೆ ಚರ್ಚೆ ಮಾಡಬೇಕು. ಇಂದಿನಿಂದ ಆ ಚರ್ಚೆ ಮಾಡುವ ಬದಲು ಕೊಪ್ಪಳ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆಯಾಗಬೇಕು. ಪ್ರತಿ ಜಿಲ್ಲೆಯಲ್ಲಿ ಒಂದೊಂದು ರೀತಿಯ ರಾಜಕಾರಣ ಇದೆ. ಗಂಗಾವತಿಯೇ ಬೇರೆ, ಕನಕಗಿರಿಯ ರಾಜಕಾರಣವೇ ಬೇರೆ. ಆ ಕ್ಷೇತ್ರದ ಅನುಗುಣವಾಗಿ ವಿರೋಧ ಪಕ್ಷವಾಗಿ ನಾವು ರಾಜಕಾರಣ ಮಾಡಬೇಕು. ಕೊಪ್ಪಳ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಕಮಲ ಅರಳಿಸುವ ಕೆಲಸ ಮಾಡಬೇಕು. ಮೇಲಿನ ರಾಜಕಾರಣ ನೋಡಿ ಜಿಲ್ಲೆಯಲ್ಲಿ ರಾಜಕಾರಣ ಮಾಡಬೇಡಿ, ಅದರಿಂದ ದೂರ ಇದ್ದರೆ ನಿಮ್ಮ ರಾಜಕಾರಣಕ್ಕೆ ಅನುಕೂಲ. ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಇದೆ. ಕಳೆದ ಮೂರು ವರ್ಷದಲ್ಲಿ ಕಾಂಗ್ರೆಸ್‌ನ ದುರಾಡಳಿತದಿಂದ ಕಾಂಗ್ರೆಸ್ ವೋಟ್ ಬ್ಯಾಂಕ್ ಬೇಸರಗೊಂಡಿದೆ. ನಾವು ಅವರನ್ನು ಮಾತನಾಡಿಸಬೇಕು. ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಮಾತನಾಡಬೇಕು. ಕಾಂಗ್ರೆಸ್ ಎಷ್ಟೇ ದುಡ್ಡು ಖರ್ಚು ಮಾಡಿದರೂ ಬರುವಂತಹ ಚುನಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಗಟ್ಟಿಯಾಗಿ ನಿಂತರೆ ಎಲ್ಲ ಜನರೂ ನಮ್ಮ ಜೊತೆಗೆ ನಿಲ್ಲುತ್ತವೆ. ಇದು ಜನ ಶಕ್ತಿ ಮತ್ತು ಹಣ ಶಕ್ತಿಯ ನಡುವೆ ಚುನಾವಣೆ ನಡೆಯುತ್ತದೆ. ಹಣದಿಂದ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಜನಶಕ್ತಿಯಿಂದಲೇ ಸೋಲಿಸಲು ಸಾಧ್ಯ ಎಂದು ಹೇಳಿದರು.
ನೀವೆಲ್ಲರೂ ಒಗ್ಗಟ್ಟಾದರೆ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ನಮ್ಮವರೇ ಶಾಸಕರಾದರೆ ಕೈ ಹಿಡಿದು ಕೇಳಲು. ಅವಕಾಶ ಇರುತ್ತದೆ. ರಾಜಕೀಯವಾಗಿ ನಮಗೆ ಒಳ್ಳೆಯ ಅವಕಾಶ ಇದೆ. ಅದನ್ನು ಉಪಯೋಗಿಸಿಕೊಳ್ಳುವ ಛಲ, ಬಲ ನಿಮ್ಮಲ್ಲಿ ಇರಬೇಕು. ಸಂಪೂರ್ಣ ಸಂಘಟನೆಯ ಜೊತೆಗೆ ಜನಾಂದೋಲನ ಮಾಡಲು ನಾನು ಸಿದ್ದನಿದ್ದೇನೆ. ಅದಕ್ಕೆ ನೀವೆಲ್ಲ ತಯಾರಾಗಬೇಕು. ಜನ ಬಲ ಇದ್ದರೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ಈ ಸರ್ಕಾರ ಹೋಗುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. 2028ರಲ್ಲಿ ವಿಜಯ ಬಿಜೆಪಿಯದ್ದೇ ಆಗುತ್ತದೆ ಎನ್ನುವ ಸಂಕಲ್ಪ ಮಾಡೋಣ ನಿಮ್ಮ ಸಹಕಾರ ಮತ್ತು ಬೆಂಬಲದಿಂದ ಪಕ್ಷ ಮುನ್ನಡೆಸಲು ಸಾಧ್ಯ ಇಲ್ಲಿನ ಕಾರ್ಯಕರ್ತರು ಮತ್ತು ನಾಯಕರ ಮೇಲೆ ನಂಬಿಕೆ ಇದೆ. ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.






















