SK Home Ad
Home ಕ್ರೀಡೆ ಫಿಫಾ ವಿಶ್ವಕಪ್ 2026: ಮೆಸ್ಸಿ-ರೊನಾಲ್ಡೊ ಕೈಯಲ್ಲೂ ಮುರಿಯಲಾಗದ ಫುಟ್‌ಬಾಲ್‌ನ ಆ 5 ಅತಿರಥ ದಾಖಲೆಗಳು!

ಫಿಫಾ ವಿಶ್ವಕಪ್ 2026: ಮೆಸ್ಸಿ-ರೊನಾಲ್ಡೊ ಕೈಯಲ್ಲೂ ಮುರಿಯಲಾಗದ ಫುಟ್‌ಬಾಲ್‌ನ ಆ 5 ಅತಿರಥ ದಾಖಲೆಗಳು!

0
34

ಅಮೆರಿಕ: ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಜಂಟಿ ಆತಿಥ್ಯದಲ್ಲಿ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಮಹಾಸಮರ ಆರಂಭವಾಗಿದೆ. ಈ ಬಾರಿ ಒಟ್ಟು 48 ದೇಶಗಳು 12 ಗುಂಪುಗಳಲ್ಲಿ ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಹಾಗೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಕಣಕ್ಕಿಳಿಯುತ್ತಲೇ ತಮ್ಮ 6ನೇ ವಿಶ್ವಕಪ್ ಆಡಿದ ಅಪರೂಪದ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಆದ್ರೆ ಇವರಿಬ್ಬರ ಕೈಯಲ್ಲೂ ಮುರಿಯಲು ಸಾಧ್ಯವಾಗದ 5 ಅತಿರಥ ದಾಖಲೆಗಳು ಫುಟ್‌ಬಾಲ್ ಇತಿಹಾಸದಲ್ಲಿವೆ.

ಒಂದೇ ವಿಶ್ವಕಪ್‌ನಲ್ಲಿ 13 ಗೋಲು: 1958ರ ವಿಶ್ವಕಪ್‌ನಲ್ಲಿ ಫ್ರಾನ್ಸ್‌ನ ಜಸ್ಟ್ ಫಾಂಟೈನ್ ಒಂದೇ ಆವೃತ್ತಿಯಲ್ಲಿ ಬರೋಬ್ಬರಿ 13 ಗೋಲುಗಳನ್ನು ಬಾರಿಸಿದ್ದರು. ಆಧುನಿಕ ಫುಟ್‌ಬಾಲ್‌ನಲ್ಲಿ ಈ ದಾಖಲೆ ಮುರಿಯುವುದು ಅಸಾಧ್ಯದ ಮಾತು. ಕಿರಿಯ ವಯಸ್ಸಿನಲ್ಲಿ ವಿಶ್ವಕಪ್ ಜಯ: ಬ್ರೆಜಿಲ್‌ನ ಫುಟ್‌ಬಾಲ್ ಸಾಮ್ರಾಟ ಪೀಲೆ, 1958ರಲ್ಲಿ ಕೇವಲ 17 ವರ್ಷ 249 ದಿನಗಳ ಪ್ರಾಯದಲ್ಲೇ ವಿಶ್ವಕಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಹ್ಯಾಟ್ರಿಕ್ ಹಾಗೂ ಫೈನಲ್‌ನಲ್ಲಿ 2 ಗೋಲು ಬಾರಿಸಿ ಮಿಂಚಿದ್ದರು.

ಮೂರು ವಿಶ್ವಕಪ್ ಮುಕುಟ: ಬ್ರೆಜಿಲ್ ದೇಶಕ್ಕೆ 1958, 1962 ಮತ್ತು 1970 ರಲ್ಲಿ ಮೂರು ಬಾರಿ ಫಿಫಾ ವಿಶ್ವಕಪ್ ಟ್ರೋಫಿ ತಂದುಕೊಟ್ಟ ಹೆಗ್ಗಳಿಕೆ ಪೀಲೆ ಅವರದ್ದಾಗಿದೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ ಇವರಾಗಿದ್ದಾರೆ.

ಒಂದೇ ಪಂದ್ಯದಲ್ಲಿ 5 ಗೋಲು: 1994ರ ವಿಶ್ವಕಪ್‌ನಲ್ಲಿ ಕ್ಯಾಮರೂನ್ ವಿರುದ್ಧದ ಒಂದೇ ಪಂದ್ಯದಲ್ಲಿ ರಷ್ಯಾದ ಒಲೆಗ್ ಸಾಲೆಂಕೊ 5 ಗೋಲುಗಳನ್ನು ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಈ ದಾಖಲೆ ಇಂದಿಗೂ ಅಖಂಡವಾಗಿದೆ.

11 ಸೆಕೆಂಡ್‌ಗಳಲ್ಲಿ ಮಿಂಚಿನ ಗೋಲು: 2002ರ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯ ಆರಂಭವಾದ ಕೇವಲ 11 ಸೆಕೆಂಡ್‌ಗಳಲ್ಲಿ ಟರ್ಕಿಯ ಹಕನ್ ಸುಕುರ್ ಗೋಲು ಬಾರಿಸಿದ್ದರು. ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವೇಗದ ಗೋಲು ಎನಿಸಿದೆ.

ಹಾಲಿ ಚಾಂಪಿಯನ್ ಅರ್ಜೆಂಟೀನಾ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದರೆ, ಪೋರ್ಚುಗಲ್ ಮೊದಲ ಟ್ರೋಫಿಯ ಕನಸಿನಲ್ಲಿದೆ. ಸ್ಟಾರ್ ಆಟಗಾರರು ಕಣದಲ್ಲಿದ್ದರೂ, ಈ 5 ಐತಿಹಾಸಿಕ ದಾಖಲೆಗಳನ್ನು ಮುರಿಯುವುದು ಮಾತ್ರ ಯಾರಿಗಾದರೂ ಹಿಮಾಲಯ ಪರ್ವತ ಏರಿದಷ್ಟೇ ಕಷ್ಟಸಾಧ್ಯ.