SK Home Ad
Home ನಮ್ಮ ಜಿಲ್ಲೆ ಕಲಬುರಗಿ ಹಾಸ್ಟೆಲ್‌ನಲ್ಲಿ ಶಾಕ್: ಹಲ್ಲಿ ಬಿದ್ದ ನೀರು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಹಾಸ್ಟೆಲ್‌ನಲ್ಲಿ ಶಾಕ್: ಹಲ್ಲಿ ಬಿದ್ದ ನೀರು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

0
105

ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್‌ನಲ್ಲಿ ಕಲುಷಿತ ನೀರು ಸೇವಿಸಿದ ವಿದ್ಯಾರ್ಥಿಗಳಲ್ಲಿ ಅಸ್ವಸ್ಥತೆ; ನಾಲ್ವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಸಂ.ಕ.ಸಮಾಚಾರ ​ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿರುವ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ಹಳೆಯ ಹಾಸ್ಟೆಲ್‌ನಲ್ಲಿ ನೀರಿನ ಟ್ಯಾಂಕ್‌ಗೆ ಹಲ್ಲಿ ಬಿದ್ದ ಪರಿಣಾಮ ಕಲುಷಿತ ನೀರು ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸ್ಟೆಲ್‌ನ ಮೇಲ್ಛಾವಣಿಯಲ್ಲಿರುವ ಓವರ್‌ಹೆಡ್ ವಾಟರ್ ಟ್ಯಾಂಕ್‌ನಲ್ಲಿ ಹಲ್ಲಿ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಈ ವಿಷಯ ತಿಳಿಯದ ವಿದ್ಯಾರ್ಥಿಗಳು ಅದೇ ನೀರನ್ನು ಕುಡಿಯಲು ಹಾಗೂ ಅಡುಗೆಗೆ ಬಳಸಿದ್ದರು. ಬಳಿಕ ನೀರಿನಿಂದ ವಿಚಿತ್ರ ದುರ್ವಾಸನೆ ಬರುತ್ತಿರುವುದನ್ನು ಕೆಲ ವಿದ್ಯಾರ್ಥಿಗಳು ಗಮನಿಸಿದ್ದು, ಅನುಮಾನಗೊಂಡು ಟ್ಯಾಂಕ್ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಸಾಹಿತ್ಯ ಪರಂಪರೆಯ ಮೌನ ಶಕ್ತಿ ಇಂದಿರಾ ಲಂಕೇಶ್ ಇನ್ನಿಲ್ಲ

ಪರಿಶೀಲನೆ ವೇಳೆ ಟ್ಯಾಂಕ್ ಒಳಗೆ ಸತ್ತ ಹಲ್ಲಿ ಪತ್ತೆಯಾಗಿದ್ದು, ಹಾಸ್ಟೆಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಕಲುಷಿತ ನೀರನ್ನು ಸೇವಿಸಿದ್ದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗಿವೆ.

20ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಅಸ್ವಸ್ಥತೆ : ಮಾಹಿತಿಯ ಪ್ರಕಾರ, ಕಲುಷಿತ ನೀರು ಸೇವಿಸಿದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸುಸ್ತು, ವಾಂತಿ ಭಾವನೆ ಹಾಗೂ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿವೆ. ಈ ಪೈಕಿ ಅರುಣಕುಮಾರ್ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಅವರನ್ನು ತಕ್ಷಣ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ನಾಲ್ವರು ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಆಡಳಿತ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ : ಈ ಘಟನೆಗೆ ಹಾಸ್ಟೆಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸದ ಪರಿಣಾಮ ಇಂತಹ ಅವಘಡ ಸಂಭವಿಸಿದೆ ಎಂದು ಅವರು ದೂರಿದ್ದಾರೆ.

ಹಾಸ್ಟೆಲ್‌ನಲ್ಲಿರುವ ಎಲ್ಲಾ ನೀರಿನ ಟ್ಯಾಂಕ್‌ಗಳನ್ನು ತಕ್ಷಣ ಸ್ವಚ್ಛಗೊಳಿಸಿ, ನೀರಿನ ಗುಣಮಟ್ಟ ಪರೀಕ್ಷೆ ನಡೆಸಬೇಕು. ಅಲ್ಲದೆ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ಶಿಬಿರ ಏರ್ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: BTDA ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಧರಣಿ: ಸೇವೆ ಸ್ಥಗಿತಗೊಳಿಸಿದ ನೌಕರರು

ಕ್ರಮಕ್ಕೆ ಒತ್ತಾಯ : ಘಟನೆಯ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹಾಸ್ಟೆಲ್ ನಿರ್ವಹಣಾ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.

ಈ ಘಟನೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಹಾಸ್ಟೆಲ್ ಮೂಲಸೌಕರ್ಯ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಕ್ರಮದತ್ತ ಎಲ್ಲರ ಗಮನ ನೆಟ್ಟಿದೆ.​