SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ BTDA ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಧರಣಿ: ಸೇವೆ ಸ್ಥಗಿತಗೊಳಿಸಿದ ನೌಕರರು

BTDA ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಧರಣಿ: ಸೇವೆ ಸ್ಥಗಿತಗೊಳಿಸಿದ ನೌಕರರು

0
116

BTDA ಸಿಬ್ಬಂದಿ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಟಿಡಿಎ ಕಚೇರಿ ಮುಂದೆ ಧರಣಿ; ಆರೋಪಿಯ ಬಂಧನದವರೆಗೆ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ

ಸಂ.ಕ.ಸಮಾಚಾರ ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಸಿಬ್ಬಂದಿ ನೀಲಕಂಠ ಅಂಕದ ಅವರ ಮೇಲೆ ರೈತರೊಬ್ಬರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರಾಧಿಕಾರದ ಸಿಬ್ಬಂದಿ ಧರಣಿ ಆರಂಭಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬಿಟಿಡಿಎ ಕಚೇರಿಯ ಪ್ರವೇಶ ದ್ವಾರದ ಮುಂಭಾಗದಲ್ಲಿ ಜಮಾಯಿಸಿದ ನೌಕರರು, ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಘಟನೆಯನ್ನು ಖಂಡಿಸಿ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದು, ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಕುಟುಂಬಸ್ಥರ ಕಣ್ಣೀರು : ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಸಿಬ್ಬಂದಿ ನೀಲಕಂಠ ಅಂಕದ ಅವರ ಕುಟುಂಬ ಸದಸ್ಯರೂ ಭಾಗವಹಿಸಿದ್ದರು. ಈ ವೇಳೆ ಅವರ ಪುತ್ರಿ ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯ ಪ್ರತಿಭಟನಾಕಾರರ ಮನಕಲಕುವಂತಿತ್ತು.

ನೀಲಕಂಠ ಅವರ ಪತ್ನಿ ಸುಜಾತಾ ಮಾತನಾಡಿ, “ಎಲ್ಲ ಸರ್ಕಾರಿ ನೌಕರರನ್ನು ಭ್ರಷ್ಟರು ಎಂದು ಬಿಂಬಿಸುವುದು ಸರಿಯಲ್ಲ. ಬಿಟಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದಲೇ ನವನಗರ ಸುಂದರವಾಗಿ ಅಭಿವೃದ್ಧಿಯಾಗಿದೆ. ನನ್ನ ಪತಿಗೆ ಈಗಾಗಲೇ ಆರೋಗ್ಯ ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ನಡೆಸಿರುವುದು ನೋವು ತಂದಿದೆ. ಸರ್ಕಾರಿ ನೌಕರರಿಗೆ ರಕ್ಷಣೆಯೇ ಇಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿಕ್ಷಣ ಇಲಾಖೆಯೇ ಅನಾಥವಾಗಿದೆ: ಖರ್ಗೆ ವಿರುದ್ಧ R ಅಶೋಕ ಆಕ್ರೋಶ

ಬಂಧನದವರೆಗೆ ಸೇವೆ ಸ್ಥಗಿತ ಎಚ್ಚರಿಕೆ : ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಬಳ್ಳಾರಿ ಮಾತನಾಡಿ, ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸುವವರೆಗೆ ಬಿಟಿಡಿಎ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. “ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಆರೋಪಿಯ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.

ಕಠಿಣ ಕ್ರಮಕ್ಕೆ ಆಗ್ರಹ : ಸರ್ಕಾರಿ ನೌಕರರ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಹಲ್ಲೆ ಮತ್ತು ಬೆದರಿಕೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದನ್ನೂ ಓದಿ: ಉತ್ತರ ಕನ್ನಡದ ಚಿರಾಪುಂಜಿ ಕ್ಯಾಸಲ್ ರಾಕ್‌ನಲ್ಲಿ ಮಳೆ ಕುಸಿತ: ಸುಪಾ ಜಲಾಶಯಕ್ಕೂ ಆತಂಕ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮಾಹಿತಿ ಸಂಗ್ರಹಿಸಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆರೋಪಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಮೇಲೆ ನೌಕರರ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರವಾಗುವ ಸಾಧ್ಯತೆ ಇದೆ.