ಪ್ರಧಾನಿ ಹುದ್ದೆ ತ್ಯಾಗ ಮಾಡಿದ ದೇವೇಗೌಡರಿಗೆ ರಾಜ್ಯಸಭೆ ಸ್ಥಾನ ದೊಡ್ಡದಲ್ಲ; ಜಿ.ಟಿ. ದೇವೇಗೌಡ ಜೆಡಿಎಸ್‌ನಲ್ಲೇ ಉಳಿಯುತ್ತಾರೆ: ಎಚ್.ಡಿ. ರೇವಣ್ಣ
ಸಂ.ಕ. ಸಮಾಚಾರ ಮೈಸೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭೆ ಸ್ಥಾನ ಕೈತಪ್ಪಿದ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಲವು ಮಹತ್ವದ ಸ್ಪಷ್ಟನೆಗಳನ್ನು ನೀಡಿದ್ದಾರೆ. ದೇವೇಗೌಡರಿಗೆ ರಾಜ್ಯಸಭೆ ಸ್ಥಾನವೇ ಮುಖ್ಯವಲ್ಲ, ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಬಂದಿರುವ ಅವರಿಗೆ ಇಂತಹ ಹುದ್ದೆಗಳು ದೊಡ್ಡ ವಿಷಯವಲ್ಲ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ದೇವೇಗೌಡರು ಎಂದಿಗೂ ರಾಜ್ಯಸಭೆ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದರು. “ಮೋದಿ ಅವರ ಕೈ ಬಲಪಡಿಸುವುದು ನಮ್ಮ ಉದ್ದೇಶ. ದೇವೇಗೌಡರು ರಾಜ್ಯಸಭೆ ಸ್ಥಾನ ಕೇಳಿಲ್ಲ. ನಾನಾಗಲಿ, ಕುಮಾರಸ್ವಾಮಿಯಾಗಲಿ ಅಥವಾ ದೇವೇಗೌಡರಾಗಲಿ ಬಿಜೆಪಿ ನಾಯಕರ ಬಳಿ ಟಿಕೆಟ್ ಕೇಳಿರಲಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ವಿವಿಯಲ್ಲಿ ಮತ್ತೊಂದು ಹಗರಣದ ಆರೋಪ; ‘ಹಣ ಕೊಟ್ಟರೆ ಪಾಸ್’ ದಂಧೆ ಬಯಲು ಎಂದ ABVP
ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಕುರಿತಂತೆ ಬಿಜೆಪಿ ನಾಯಕರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಜೆಡಿಎಸ್‌ಗೆ ಯಾವುದೇ ಗೊಂದಲ ಇರಲಿಲ್ಲ ಎಂದ ಅವರು, “ಒಮ್ಮೆ ದೇವೇಗೌಡರ ಹೆಸರು ಪ್ಯಾನಲ್‌ನಲ್ಲಿ ಇದೆ ಎಂದು ಹೇಳಲಾಯಿತು, ಮತ್ತೊಮ್ಮೆ ಇಲ್ಲ ಎಂದು ಹೇಳಲಾಯಿತು. ಆದರೆ ನಮಗೆ ಯಾವುದೇ ಗೊಂದಲವಾಗಿರಲಿಲ್ಲ” ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಈ ವಿಚಾರವಾಗಿ ಮಾಡುತ್ತಿರುವ ಟೀಕೆಗಳು ಈಗ ಅಪ್ರಸ್ತುತವಾಗಿವೆ ಎಂದು ಪ್ರತಿಕ್ರಿಯಿಸಿದ ರೇವಣ್ಣ, ಹಾಸನದ ಕೆಲ ನಾಯಕರನ್ನು ಉಲ್ಲೇಖಿಸಿ ಪರೋಕ್ಷ ವಾಗ್ದಾಳಿ ನಡೆಸಿದರು. “ಹಾಸನದಲ್ಲಿರುವವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೋ ಅಥವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೋ ಎಂಬುದೇ ಗೊತ್ತಿಲ್ಲ. ಅವರು ಯಾವ ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಬೇಕು” ಎಂದು ಕಟುವಾಗಿ ಹೇಳಿದರು.
ಇದನ್ನೂ ಓದಿ: ‘ಗೃಹಿಣಿ’ ಪದಕ್ಕೆ ಹೊಸ ಅರ್ಥ ನೀಡಿದ ಸುಪ್ರೀಂ ಕೋರ್ಟ್
ಜಿ.ಟಿ. ದೇವೇಗೌಡ ಜೆಡಿಎಸ್‌ನಲ್ಲೇ ಉಳಿಯುತ್ತಾರೆ : ಮೈಸೂರಿನ ರಾಜಕೀಯದಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿರುವ ಜಿ.ಟಿ. ದೇವೇಗೌಡರ ರಾಜಕೀಯ ಭವಿಷ್ಯದ ಕುರಿತ ಪ್ರಶ್ನೆಗೂ ರೇವಣ್ಣ ಉತ್ತರ ನೀಡಿದರು. ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆಯುವುದಿಲ್ಲ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿಯೇ ಸ್ಪರ್ಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
“ನಾನು, ಕುಮಾರಸ್ವಾಮಿ, ಜಿ.ಟಿ. ದೇವೇಗೌಡ ಮತ್ತು ಸಾರಾ ಮಹೇಶ್ ಎಲ್ಲರೂ ಒಟ್ಟಾಗಿ ಕೂತು ಮಾತುಕತೆ ನಡೆಸುತ್ತೇವೆ. ಜಿ.ಟಿ. ದೇವೇಗೌಡರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಅವರು ಖುದ್ದಾಗಿ ದೇವೇಗೌಡರನ್ನು ಭೇಟಿ ಮಾಡಿ ತಮ್ಮ ನಿಲುವು ತಿಳಿಸಿದ್ದಾರೆ. ಪಕ್ಷದೊಳಗಿನ ಯಾವುದೇ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ” ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರದಿಂದ ಸಿಹಿಸುದ್ದಿ-ಎಥೆನಾಲ್ ಮಿಶ್ರಿತ ಇಂಧನಕ್ಕೆ ತೆರಿಗೆ ವಿನಾಯಿತಿ
ಈ ಹೇಳಿಕೆಗಳು ಜೆಡಿಎಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳಿಗೆ ತೆರೆ ಬೀಳುವ ಸಾಧ್ಯತೆಗಳ ಕುರಿತು ಊಹಾಪೋಹಗಳು ಕೇಳಿಬರುತ್ತಿವೆ.
ಡಿಕೆ ಶಿವಕುಮಾರ್ ಸಿಎಂ ಆದರೂ ಒಕ್ಕಲಿಗ ಮತಗಳು ಚದುರುವುದಿಲ್ಲ : ರಾಜ್ಯದ ರಾಜಕೀಯ ಬೆಳವಣಿಗೆಗಳು ಹಾಗೂ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಹಿನ್ನೆಲೆಯಲ್ಲಿ ಮಾತನಾಡಿದ ರೇವಣ್ಣ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೂ ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ದೂರವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ರಾಜ್ಯಸಭಾ ನಾಮಪತ್ರ ತಿರಸ್ಕಾರ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್
“2004ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆಗೆ ಹೋಗಲಿಲ್ಲ. ಹಾಗೆಯೇ ಈಗಲೂ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್‌ನಿಂದ ದೂರವಾಗುವುದಿಲ್ಲ. ಜೆಡಿಎಸ್‌ನ ಮತ ಬ್ಯಾಂಕ್ ಹಿಂದೆ ಸಮಸ್ಯೆಯಾಗಿಲ್ಲ, ಮುಂದೆಯೂ ಆಗುವುದಿಲ್ಲ” ಎಂದು ಹೇಳಿದರು.
ದೇವೇಗೌಡರ ರಾಜಕೀಯ ಮುಗಿದಿದೆ ಎಂದು ಹಿಂದೆ ಹಲವರು ಹೇಳಿದ್ದರೂ ಅವರು ಇಂದಿಗೂ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ ಎಂದು ನೆನಪಿಸಿದ ರೇವಣ್ಣ, “ನಮ್ಮ ಸಮಾಜದ ಒಬ್ಬರು ಮುಖ್ಯಮಂತ್ರಿ ಆಗುವುದು ಸಂತಸದ ವಿಚಾರ. ಆದರೆ ಅದಕ್ಕೂ ಜೆಡಿಎಸ್‌ನ ಮತಬ್ಯಾಂಕ್‌ಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಅಂಕಣ ಬರಹ – ಹಿರಿಯರ ಕ್ಯಾತೆ ಸಾಕು, ಹೊಸಬರಿಗೆ ದಾರಿಬಿಡಿ
2028ರ ವಿಧಾನಸಭೆ ಚುನಾವಣೆಯ ಬಗ್ಗೆ ಈಗಲೇ ಚರ್ಚೆ ನಡೆಸುವುದು ಅನಗತ್ಯ ಎಂದು ಹೇಳಿದ ಅವರು, ಪ್ರಸ್ತುತ ಆಡಳಿತದ ಮೇಲೆ ಗಮನಹರಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.






















