ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿದ್ದಂತೆ ಕರ್ನಾಟಕದಲ್ಲೂ ಮಳೆರಾಯ ಅಬ್ಬರಿಸತೊಡಗಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿ ಭಾರಿ ಮಳೆಯಾಗಿದ್ದು ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆ ಒಂದು ಕಡೆ ಆತಂಕ ಸೃಷ್ಟಿಸುತ್ತಿದ್ದರೆ, ಇನ್ನೊಂದೆಡೆ ಅಚ್ಚರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ನಿನ್ನೆ ವಲ್ಲಭಬಾಯಿ ನಗರದಲ್ಲಿ ವರುಣನ ಆರ್ಭಟಕ್ಕೆ ಮನೆಯೊಂದರ ಇಡೀ ಮೇಲ್ಚಾವಣಿಯೇ ಕುಸಿದಿದೆ.
ಅಷ್ಟಕ್ಕೂ ನಡೆದಿದ್ದೇನು ಎನ್ನುವುದನ್ನು ನೋಡುವುದಾದರೆ, ತಂದೆ ಶಬ್ಬೀರ್ ಬಾಗವಾನ್ ಮತ್ತು ಮಗ ಆರ್ಬಾಜ್ ಬಾಗವಾನ್ ಬಾಗಲಕೋಟೆಯ ವಲ್ಲಭಬಾಯಿ ನಗರದ ನಿವಾಸಿಗಳಾಗಿದ್ದು, ಹಣ್ಣಿನ ವ್ಯಾಪಾರ ಮಾಡುತ್ತಾರೆ. ನಿನ್ನೆ ತಂದೆ ಮತ್ತು ಮಗ ಮನೆಯಲ್ಲಿದ್ದಾಗ ಮಳೆಯ ತೀವ್ರತೆಗೆ ಮೇಲ್ಚಾವಣಿಯಿಂದ ಸಣ್ಣದಾಗಿ ಮಣ್ಣಿನ ತುಕಡಿಗಳು ಉದುರಲು ಆರಂಭಿಸಿದೆ. ಹೀಗಾಗಿ ಸಾಕು ಬೆಕ್ಕು ಹೊರಗೆ ಓಡಿದೆ. ಇನ್ನು ಇದೆ ವೇಳೆ ಬೆಕ್ಕಿಗೆ ಹಸಿವು ಕೂಡ ಆಗಿತ್ತಂತೆ. ಹೀಗಾಗಿ ಬೆಕ್ಕಿಗೆ ಏನಾದರು ತಿನ್ನಿಸಬೇಕು ಎನ್ನುವ ಕಾರಣಕ್ಕಾಗಿ ಶಬ್ಬೀರ್ ಬೆಕ್ಕನ್ನು ಹಿಡಿಯಲು ಬೆಕ್ಕಿನ ಹಿಂದೆಯೇ ಹೊರಗೆ ಧಾವಿಸಿದ್ದಾರೆ. ತಂದೆಯನ್ನು ಕಂಡು ಆರ್ಬಾಜ್ ಕೂಡ ಅವರ ಹಿಂದೆ ಮನೆಯಿಂದ ಹೊರ ಬಂದಿದ್ದಾರೆ. ಇವರಿಬ್ಬರು ಮನೆಯ ಹೊಸ್ತಿಲು ದಾಟಿ ಹೊರಗೆ ಬರುತ್ತಿದ್ದಂತೆಯೇ ಇಡೀ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ.
ಇನ್ನು ಅದೃಷ್ಟವಶಾತ್ ಮನೆಯಲ್ಲಿ ನಡೆಯಬೇಕಿದ್ದ ಮದುವೆಯ ಕಾರ್ಯಕ್ರಮವೊಂದರ ನಿಮಿತ್ತ ಕುಟುಂಬದ ಉಳಿದ ಸದಸ್ಯರೆಲ್ಲರೂ ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಕೇವಲ ತಂದೆ-ಮಗ ಮಾತ್ರ ಮನೆಯಲ್ಲಿದ್ದು, ಸಾಕುಪ್ರಾಣಿಯ ಕಾರಣದಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇಡೀ ಹಳ್ಳವೇ ಗ್ರಾಮದೊಳಗೆ ನುಗ್ಗಿದಂತಾಗಿದ್ದು, ಜನರು ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನು ಚಿಮ್ಮನಚೋಡ ಮತ್ತು ನರನಾಳ ಗ್ರಾಮದ ನಡುವಿನ ಕಿರು ಸೇತುವೆಯೊಂದು ಭಾರಿ ಮಳೆಗೆ ಕುಸಿದು ಬಿದ್ದಿದೆ. ಇದರಿಂದಾಗಿ ಚಿಂಚೋಳಿ – ಭಾಲ್ಕಿ ನಡುವಿನ ಪ್ರಮುಖ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಬಳ್ಳಾರಿಯಲ್ಲೂ ಕೂಡ ತಡರಾತ್ರಿ ಸತತ ಎರಡು ಗಂಟೆಗಳ ಕಾಲ ಧೋ ಎಂದು ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ವರ್ಷಪೂರ್ತಿ ತಿನ್ನಲು ಸಂಗ್ರಹಿಸಿಟ್ಟಿದ್ದ ದವಸ-ಧಾನ್ಯಗಳೆಲ್ಲಾ ನೀರುಪಾಲಾಗಿವೆ. ಗದಗ ಮತ್ತು ಹಾವೇರಿ ಜಿಲ್ಲೆಯಲ್ಲೂ ಕೂಡ ಧಾರಾಕಾರ ಮಳೆಯಾಗಿದೆ.





















