SK Home Ad
Home ಸುದ್ದಿ ರಾಜ್ಯ ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಆರ್ಭಟ; ಆನೇಕಲ್, ಅತ್ತಿಬೆಲೆ ರಸ್ತೆಗಳು ಜಲಾವೃತ!

ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಆರ್ಭಟ; ಆನೇಕಲ್, ಅತ್ತಿಬೆಲೆ ರಸ್ತೆಗಳು ಜಲಾವೃತ!

0
69

ರಾಜ್ಯಕ್ಕೆ ಮುಂಗಾರು ಮಾರುತಗಳು ಅಧಿಕೃತವಾಗಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದಂತೆ, ಇತ್ತ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇಂದು ಮಧ್ಯಾಹ್ನದ ಬಳಿಕ ಆನೇಕಲ್ ಹಾಗೂ ಅದರ ಸುತ್ತಮುತ್ತಲಿನ ಭಾಗಗಳಲ್ಲಿ ವರುಣ ಆರ್ಭಟಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ವಿಶೇಷವಾಗಿ ಆನೇಕಲ್ ಪಟ್ಟಣ, ಅತ್ತಿಬೆಲೆ ಹಾಗೂ ಸರ್ಜಾಪುರ ಪರಿಸರದಲ್ಲಿ ಧೋ ಎಂದು ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಕಳೆದ ಮೂರು ದಿನಗಳಿಂದಲೂ ಈ ಭಾಗದಲ್ಲಿ ಸಂಜೆ ವೇಳೆ ಸತತವಾಗಿ ಮಳೆ ಸುರಿಯುತ್ತಿದ್ದು, ಇಂದು ಕೂಡ ಅದು ಮುಂದುವರಿದಿದೆ. ದಿಢೀರ್‌ ಎದುರಾದ ಈ ಜಲಾವೃತ ಪರಿಸ್ಥಿತಿಯಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಡುವಂತಾಯಿತು.

ಇನ್ನು ಬೆಂಗಳೂರು ನಗರದ ಹವಾಮಾನದ ಕಡೆ ನೋಡುವುದಾದರೆ, ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ಎಂದಿನಂತೆ ಬಿಸಿಲಿನ ವಾತಾವರಣವಿತ್ತು. ಆದರೆ ಮಧ್ಯಾಹ್ನವಾಗುತ್ತಿದ್ದಂತೆ ಸಿಲಿಕಾನ್ ಸಿಟಿಯ ಚಿತ್ರಣವೇ ಬದಲಾಯಿತು. ಬಿಸಿಲಿನ ಜಾಗವನ್ನು ದಟ್ಟವಾದ ಕಾರುಮೋಡಗಳು ಆವರಿಸಿಕೊಂಡವು. ತದನಂತರ ನಗರದ ಹಲವೆಡೆ ಸೋನೆ ಮಳೆಯಾಗಿದ್ದು, ಒಣಗುತ್ತಿದ್ದ ನಗರಕ್ಕೆ ತಂಪಾದ ಗಾಳಿ ಹೊಸ ಚೈತನ್ಯ ನೀಡಿದೆ.

ಸದ್ಯ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನಗರದಲ್ಲಿ ಸಂಪೂರ್ಣ ತಂಪಾದ ವಾತಾವರಣ ನಿರ್ಮಾಣವಾಗಿದ್ದು, ಇಂದು ರಾತ್ರಿಯೊಳಗೆ ನಗರದ ವಿವಿಧೆಡೆ ಇನ್ನು ಎರಡು ಬಾರಿ ಭಾರೀ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಮಾನ್ಸೂನ್ ಆರಂಭದಲ್ಲೇ ವರುಣ ಈ ರೇಂಜ್‌ಗೆ ಬ್ಯಾಟಿಂಗ್ ಶುರು ಮಾಡಿರುವುದು ಬೆಂಗಳೂರಿಗರಲ್ಲಿ ಒಂದೆಡೆ ಸಂತಸ ಮೂಡಿಸಿದರೆ, ಮತ್ತೊಂದೆಡೆ ಟ್ರಾಫಿಕ್ ಹಾಗೂ ವಾಹನ ಸಂಚಾರದ ಆತಂಕವನ್ನು ಹೆಚ್ಚಿಸಿದೆ.