ಚಂಡೀಗಢ: ಕೆ.ಎಲ್. ರಾಹುಲ್ ಮತ್ತು ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ ತಂಡ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಪಂದ್ಯದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 368 ರನ್‌ಗಳನ್ನು ಕಲೆಹಾಕಿದೆ.
ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಜೋಡಿ ಕೇವಲ 41 ರನ್‌ಗಳಿಗೆ ಬೇರ್ಪಟ್ಟಿತ್ತು. ಜೈಸ್ವಾಲ್ 5 ಬೌಂಡರಿಗಳಿಂದ 24 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಕೆ.ಎಲ್. ರಾಹುಲ್ ಜತೆಯಾದ ಸಾಯಿ ಸುದರ್ಶನ್ ಕೂಡ 81 ರನ್‌ಗಳ ಉಪಯುಕ್ತ ಕಾಣಿಕೆಯ ಮೂಲಕ 139 ರನ್‌ಗಳ ಜತೆಯಾಟ ನಡೆಸಿ ಸಲೀಮ್ ಸಫಿ ಎಸೆತದಲ್ಲಿ ಅಫ್ಸರ್ ಜಜೈ ಅವರಿಗೆ ಕ್ಯಾಚ್ ನೀಡಿ ಔಟಾದರು.
ಮೂರನೇ ವಿಕೆಟ್‌ಗೆ ಶುಭಮನ್ ಗಿಲ್ ಮತ್ತು ಕೆ.ಎಲ್. ರಾಹುಲ್ ಜೋಡಿ 67 ರನ್‌ಗಳ ಜತೆಯಾಟ ನಡೆಸಿದ್ದು, ಈ ವೇಳೆ ರಾಹುಲ್ ಶತಕ ಪೂರೈಸಿ ಜಿಯಾವುರ್ ರೆಹಮಾನ್ ಶರೀಫಿ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಜ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಮೊದಲ ದಿನದ ಅಂತ್ಯಕ್ಕೆ ಮುರಿಯದ ನಾಲ್ಕನೇ ವಿಕೆಟ್‌ಗೆ ಶುಭಮನ್ ಗಿಲ್ ಅಜೇಯ 103 ರನ್ ಮತ್ತು ರಿಷಭ ಪಂತ್ ಅಜೇಯ 50 ರನ್ ಗಳಿಸಿದ್ದು, ಭಾನುವಾರ ಆಟ ಮುಂದುವರಿಸಲಿದ್ದಾರೆ.






















