ಐಪಿಎಲ್ ಇತಿಹಾಸದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವಾಗಲೂ ಮುಂಚೂಣಿಯಲ್ಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತನ್ನ ಸಾಂಪ್ರದಾಯಿಕ ಕೆಂಪು ಮತ್ತು ಬಂಗಾರದ ಬಣ್ಣದ ಜರ್ಸಿಯನ್ನು ಬದಿಗಿಟ್ಟು, ಹಸಿರು ಜರ್ಸಿ ಧರಿಸಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ. ಪರಿಸರ ಸಂರಕ್ಷಣೆ ಮತ್ತು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 2011ರಿಂದಲೇ ಆರಂಭವಾದ ಈ ‘ಗೋ ಗ್ರೀನ್’ ಸಂಪ್ರದಾಯ ಇಂದಿಗೂ ಅಚ್ಚುಕಟ್ಟಾಗಿ ಮುಂದುವರಿಯುತ್ತಿದೆ.
ಈ ಹಸಿರು ಜರ್ಸಿಯ ಹಿಂದಿರುವ ವಿಶೇಷತೆಯೆಂದರೆ ಇವುಗಳನ್ನು ಸಂಪೂರ್ಣವಾಗಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ರೀಸೈಕಲ್ ಮಾಡಿ ಸಿದ್ಧಪಡಿಸಿರುವ ಈ ಜರ್ಸಿಗಳು ಪರಿಸರ ಸ್ನೇಹಿ ಬದುಕಿಗೆ ಸ್ಫೂರ್ತಿಯಾಗಿವೆ. ಅಷ್ಟೇ ಅಲ್ಲದೆ ವಿಶ್ವದ ಮೊದಲ ಕಾರ್ಬನ್ ನ್ಯೂಟ್ರಲ್ ಟಿ20 ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಆರ್‌ಸಿಬಿ, ಟಾಸ್ ವೇಳೆ ಎದುರಾಳಿ ನಾಯಕನಿಗೆ ಧ್ವಜದ ಬದಲು ಸಸಿಯನ್ನು ನೀಡುವ ಮೂಲಕ ಹಸಿರಿನ ಮಹತ್ವವನ್ನು ಸಾರುತ್ತಿದೆ. ಪಂದ್ಯದ ಆರಂಭದಲ್ಲಿ ನಾಯಕ ರಜತ್ ಪಾಟಿದಾರ್ ಅವರು ಡೆಲ್ಲಿ ನಾಯಕ ಅಕ್ಷರ್ ಪಟೇಲ್‌ಗೆ ಸಸಿ ನೀಡಿ, ಭೂಮಿಯ ರಕ್ಷಣೆಗಾಗಿ ನಾವೆಲ್ಲರೂ ಬದ್ಧರಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಇನ್ನು ಪಂದ್ಯದ ಕಣಕ್ಕೆ ಬಂದರೆ ಹಸಿರು ಜರ್ಸಿಯಲ್ಲಿ ಆರ್‌ಸಿಬಿಯ ಟ್ರ್ಯಾಕ್ ರೆಕಾರ್ಡ್ ಅಷ್ಟೇನು ಆಶಾದಾಯಕವಾಗಿಲ್ಲ. ಈವರೆಗೆ ಆಡಿದ ಹತ್ತು ಪಂದ್ಯಗಳಲ್ಲಿ ತಂಡ ಗೆದ್ದಿರುವುದು ಕೇವಲ ಮೂರರಲ್ಲಿ ಮಾತ್ರ. ಆದರೆ ಮೈದಾನದಲ್ಲಿ ಇಂದು ಆರ್‌ಸಿಬಿ ಆಟಗಾರರು ತೋರಿದ ಕೆಚ್ಚೆದೆಯ ಆಟ ಹೊಸ ಭರವಸೆ ಮೂಡಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಪರವಾಗಿ ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 38 ಎಸೆತಗಳಲ್ಲಿ 63 ರನ್ ಚಚ್ಚಿದರು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡಿದರೂ, ಮಧ್ಯಮ ಕ್ರಮಾಂಕದಲ್ಲಿ ಡೆಲ್ಲಿ ಬೌಲರ್‌ಗಳಾದ ಲುಂಗಿ ಎಂಗಿಡಿ ಮತ್ತು ಕುಲ್ದೀಪ್ ಯಾದವ್ ಅವರ ಶಿಸ್ತುಬದ್ಧ ದಾಳಿಯಿಂದಾಗಿ ತಂಡ 175 ರನ್‌ಗಳಿಗೆ ನಿಯಂತ್ರಿಸಲ್ಪಟ್ಟಿತು.
176 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿಗೆ ಆರಂಭದಲ್ಲೇ ಆಘಾತ ಕಾದಿತ್ತು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಪಥುಮ್ ನಿಸ್ಸಾಂಕ, ಕರುಣ್ ನಾಯರ್ ಮತ್ತು ಸಮೀರ್ ರಿಜ್ವಿ ಅವರ ವಿಕೆಟ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ಹಸಿರು ಉಡುಪಿನಲ್ಲಿ ಪರಿಸರ ಪ್ರೇಮ ಮೆರೆಯುತ್ತಿರುವ ಆರ್‌ಸಿಬಿ, ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಲಕ್ಕಿ ಫ್ಯಾಕ್ಟರ್ ಅನ್ನು ಬದಲಿಸಿಕೊಳ್ಳಲಿದೆಯೇ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.























