Home Advertisement
Home ಕ್ರೀಡೆ IPL Final ಅಹಮದಾಬಾದ್‌ಗೆ ಶಿಫ್ಟ್: D K ಶಿವಕುಮಾರ್ ಸ್ಪಷ್ಟನೆ

IPL Final ಅಹಮದಾಬಾದ್‌ಗೆ ಶಿಫ್ಟ್: D K ಶಿವಕುಮಾರ್ ಸ್ಪಷ್ಟನೆ

0
71

ಬೆಂಗಳೂರು: ಐಪಿಎಲ್ 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸುವ ಮೂಲ ಯೋಜನೆಯನ್ನು ಬದಲಿಸಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಗುಜರಾತಿನ ಅಹಮದಾಬಾದ್‌ ನರೇಂದ್ರ ಮೋದಿ ಕ್ರಿಡಾಂಗಣಕ್ಕೆ ಸ್ಥಳಾಂತರಿಸಿರುವುದು ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸ್ಥಳಾಂತರಕ್ಕೆ ಸಂಬಂಧಿಸಿದಂತೆ “ಶಾಸಕರಿಗೆ ಟಿಕೆಟ್ ಬೇಡಿಕೆ” ಮತ್ತು “ಕ್ರೀಡಾಂಗಣದ ಸೀಮಿತ ಸಾಮರ್ಥ್ಯ” ಮುಂತಾದ ಕಾರಣಗಳು ಉಲ್ಲೇಖವಾಗಿದ್ದರೂ, ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಈ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸುವುದಕ್ಕೂ ಶಾಸಕರಿಗೆ ಟಿಕೆಟ್ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚಿನ ಪ್ರೇಕ್ಷಕರು ಸೇರಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದು,” ಎಂದು ಹೇಳಿದರು.

ಅವರು ಮುಂದುವರೆದು, ಪಂದ್ಯ ಟಿಕೆಟ್ ಹಂಚಿಕೆ ವ್ಯವಸ್ಥೆಯಲ್ಲಿ ಒಂದು ಭಾಗವನ್ನು ಬೇರೆ ರಾಜ್ಯಗಳಿಗೆ ಮೀಸಲಿಡುವ ಸಾಧ್ಯತೆ ಇರುವುದನ್ನೂ ಉಲ್ಲೇಖಿಸಿದರು. ಈ ಮೂಲಕ ಬಿಸಿಸಿಐ ತನ್ನ ನಿರ್ಧಾರವನ್ನು ಪ್ರೇಕ್ಷಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡೇ ತೆಗೆದುಕೊಂಡಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ಮುಸ್ಲಿಂ ನಾಯಕರ ಅಮಾನತು ಹಿಂಪಡೆಯುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಅದು ಪಕ್ಷದ ಆಂತರಿಕ ನಿರ್ಧಾರ ಎಂದು ಹೇಳಿದರು. “ಪಕ್ಷದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗಿದೆ. ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ,” ಎಂದು ಹೇಳಿದರು.

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಟಿವಿಕೆಗೆ ನೀಡಿದ ಬೆಂಬಲದ ಬಗ್ಗೆ ಮಾತನಾಡಿದ ಅವರು, “ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಹೇಳಿದರು.

ಈ ನಡುವೆ, ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರ ವಿಚಾರವು ಕ್ರೀಡಾ ಅಭಿಮಾನಿಗಳಲ್ಲೂ ಚರ್ಚೆಗೆ ಕಾರಣವಾಗಿದ್ದು, ಬೆಂಗಳೂರಿನಲ್ಲಿ ಪಂದ್ಯ ನಡೆಯದಿರುವುದರಿಂದ ಅಭಿಮಾನಿಗಳ ನಿರಾಶೆ ವ್ಯಕ್ತವಾಗಿದೆ.