ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಇಂದು ಐಪಿಎಲ್ 2026ರ ಅತ್ಯಂತ ಕುತೂಹಲಕಾರಿ ಪಂದ್ಯಕ್ಕೆ ವೇದಿಕೆ ಆಗಿದೆ. ಈ ಆವೃತ್ತಿಯಲ್ಲಿ ಸೋಲನ್ನೇ ಕಾಣದೆ ಅಜೇಯವಾಗಿ ಮುನ್ನುಗ್ಗುತ್ತಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ರೇಕ್ ಹಾಕಲು ಅಕ್ಷರ್ ಪಟೇಲ್ ನೇತೃತ್ವದ ದೆಹಲಿ ಕ್ಯಾಪಿಟಲ್ಸ್ ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿದ್ದ ದೆಹಲಿಗೆ ಇಂದಿನ ಪಂದ್ಯ ಪ್ರತಿಷ್ಠೆಯ ಕಣವಾಗಿದ್ದು, ಟಾಸ್ ಗೆದ್ದ ನಾಯಕ ಅಕ್ಷರ್ ಪಟೇಲ್ ಯಾವುದೇ ಹಿಂಜರಿಕೆಯಿಲ್ಲದೆ ಮೊದಲು ಬ್ಯಾಟಿಂಗ್ ಮಾಡುವ ಧೈರ್ಯದ ನಿರ್ಧಾರ ಕೈಗೊಂಡರು.
ಪಂದ್ಯದ ಆರಂಭದಿಂದಲೇ ದೆಹಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳು ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಪಾತುಮ್ ನಿಸ್ಸಾಂಕ ಕೇವಲ ಎರಡು ಓವರ್‌ಗಳಲ್ಲಿ 23 ರನ್ ಚಚ್ಚುವ ಮೂಲಕ ಸ್ಪೋಟಕ ಆರಂಭ ನೀಡಿದರು. ನಿಸ್ಸಾಂಕ 11 ರನ್ ಗಳಿಸಿ ಅರ್ಶ್ದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರೂ, ದೆಹಲಿಯ ರನ್ ವೇಗಕ್ಕೆ ಎಳ್ಳಷ್ಟೂ ಅಡ್ಡಿಯಾಗಲಿಲ್ಲ. ಪವರ್‌ಪ್ಲೇ ಮುಕ್ತಾಯದ ವೇಳೆಗೆ ದೆಹಲಿ ಒಂದು ವಿಕೆಟ್ ನಷ್ಟಕ್ಕೆ 68 ರನ್ ಕಲೆಹಾಕಿ ಬೃಹತ್ ಮೊತ್ತದ ಮುನ್ಸೂಚನೆ ನೀಡಿತು.
ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಕೆ.ಎಲ್. ರಾಹುಲ್ ಕೇವಲ 26 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿ ಮಿಂಚಿದರೆ, ಅವರಿಗೆ ಸಮರ್ಥ ಸಾಥ್ ನೀಡಿದ ನಿತೀಶ್ ರಾಣಾ ಪಂಜಾಬ್ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾದರು. ಅದರಲ್ಲೂ 12ನೇ ಓವರ್‌ನಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಎಸೆತದಲ್ಲಿ ಸತತ ಆರು ಬೌಂಡರಿಗಳನ್ನು ಬಾರಿಸುವ ಮೂಲಕ ರಾಣಾ ಇಡೀ ಕ್ರೀಡಾಂಗಣವನ್ನು ಅಚ್ಚರಿಯಲ್ಲಿ ಮುಳುಗಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಣಾ ಮತ್ತು ರಾಹುಲ್ ಜೋಡಿ ಶತಕದ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ಪಂಜಾಬ್ ತಂಡವನ್ನು ಸಂಕಷ್ಟಕ್ಕೆ ದೂಡಿದರು.
ದೆಹಲಿಯ ಅಬ್ಬರ ಅಲ್ಲಿಗೇ ನಿಲ್ಲಲಿಲ್ಲ. 16ನೇ ಓವರ್‌ನಲ್ಲಿ ವೈಶಾಕ್ ವಿಜಯ್ ಕುಮಾರ್ ಎಸೆತಗಳಲ್ಲಿ ಅಬ್ಬರಿಸಿದ ಕೆ.ಎಲ್. ರಾಹುಲ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಕೆ.ಎಲ್ ರಾಹುಲ್ ಭರ್ಜರಿ 9 ಸಿಕ್ಸರ್, 16 ಬೌಂಡರಿಗಳ ಮೂಲಕ 152 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264ರ ಬೃಹತ್ ಮೊತ್ತ ಗಳಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಪಡೆಗೆ ದೆಹಲಿಯ ಈ ರನ್ ಮಳೆಯನ್ನು ತಡೆಯುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.























