ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮೂಕಾಂಬಿಕಾ ದೇವಿಗೆ 1,600 ಗ್ರಾಂ ತೂಕದ ಬೆಳ್ಳೆ ಖಡ್ಗವನ್ನು ಸಮರ್ಪಿಸಿದರು.
30 ನಿಮಿಷ ದೇಗುಲದಲ್ಲಿ: ದೇವಾಲಯಕ್ಕೆ ಆಗಮಿಸಿದ ವೇಳೆ ಆಕರ್ಷಕ ಕೆಂಪು ಶಲ್ಯ ಧರಿಸಿದ್ದ ವಿಜಯ್ ಅವರನ್ನು ದೇವಸ್ಥಾನದ ಅರ್ಚಕರು ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸಿಎಂ ವಿಜಯ್ ಮೂಕಾಂಬಿಕಾ ದೇವಸ್ಥಾನದಲ್ಲಿಯೇ ಸುಮಾರು 30 ನಿಮಿಷಗಳ ಕಾಲ ಇದ್ದು, ದೇವಿಯ ದರ್ಶನ ಪಡೆದರು.
ಶುಕ್ರವಾರದ ವಿಶೇಷ ದಿನವಾಗಿದ್ದರಿಂದ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಅರ್ಚಕ ಹಾಗೂ ಆಡಳಿತ ಸಮಿತಿ ಸದಸ್ಯ ನಿತ್ಯಾನಂದ ಅಡಿಗ ಅವರು ಸಂಕಲ್ಪ ಮಾಡಿಸಿ ವಿಜಯ್ ಅವರ ಕೈಗೆ ರಕ್ಷಾದಾರ ಕಟ್ಟಿದರು.
1,600 ಗ್ರಾಂ ಬೆಳ್ಳಿ ಖಡ್ಗ ಸಮರ್ಪಣೆ: ಮುಖ್ಯಮಂತ್ರಿ ವಿಜಯ್ ಋಣ ವಿಮೋಚನೆಗಾಗಿ ದೇವಿಗೆ 1,600 ಗ್ರಾಂ ತೂಕವುಳ್ಳ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ ತಾಂಬೂಲ ಅರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಖಡ್ಗದ ತೂಕದ ಹಿಂದೆ ಒಂದು ನಂಬಿಕೆಯನ್ನು ಹೊಂದಲಾಗಿದೆ. ಅದಕ್ಕಾಗಿ ಅದನ್ನು ಇಂತಿಷ್ಟು ತೂಕದಲ್ಲಿಯೇ ಇರಬೇಕೆಂದು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
ಬೆಳ್ಳಿ ಖಡ್ಗದ ಹಿಂದೆ ಧಾರ್ಮಿಕ ನಂಬಿಕೆ: ಬ್ರಹ್ಮ, ವಿಷ್ಣು, ಮಹೇಶ್ವರ, ಕಾಳಿ, ಲಕ್ಷ್ಮೀ, ಸರಸ್ವತಿ ಸೇರಿ ಏಳು ದೇವತೆಗಳ ಹಾಗೂ ಆದಿ ಶಂಕರಾಚಾರ್ಯರ ಶಕ್ತಿ ಸಂಗಮವಿರುವ ಪವಿತ್ರ ಸ್ಥಾನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಎಂಬ ಹಿನ್ನೆಲೆಯನ್ನು ಹೊಂದಿದೆ. ಈ ಕಾರಣಕ್ಕಾಗಿ 1.6 ಕೆಜಿ ಅಂದರೆ 1+6=7 ಆಗುವಂತೆ ಬೆಳ್ಳೆ ಖಡ್ಗವನ್ನು ಅರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಶತ್ರುಗಳ ನಾಶಕ್ಕಾಗಿ, ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡಲು ದೇವಿಗೆ ಖಡ್ಗ ಅರ್ಪಿಸುವ ಹಿನ್ನೆಲೆಯೂ ಇದೆ.
ಏಳು ಅಂದ್ರೆ ಸಪ್ತಮ ಸ್ಥಾನ: ಸಿಎಂ ವಿಜಯ್ ಅರ್ಪಿಸಿದ ಬೆಳ್ಳಿ ಖಡ್ಗದ ತೂಕ 1,600 ಗ್ರಾಂ ಆಗಿದ್ದು, ಎಲ್ಲವನ್ನೂ ಕೂಡಿದಾಗ 7 ಆಗುವುದು, ಏಳು ಅಂದರೆ ಸಪ್ತಮ ಸ್ಥಾನ. ಜೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದ ಏಳನೇ ಮನೆಯು ಪತಿ-ಪತ್ನಿ ಸ್ಥಾನವನ್ನು ಸೂಚಿಸುತ್ತದೆ. ಹೀಗಾಗಿ ದಾಂಪತ್ಯ ಸುಖ, ವ್ಯಾವಹಾರಿಕ ಜೀವನಕ್ಕಾಗಿ 7 ಸಹಕಾರಿ ಎಂದು ಹೇಳಲಾಗುತ್ತದೆ. ಹೀಗಾಗಿ ವಿಜಯ್ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ ಎನ್ನಲಾಗುತ್ತಿದೆ.






















