ಕರಾವಳಿ ಜಿಲ್ಲೆ ಉತ್ತರ ಕನ್ನಡದ ಹೆಮ್ಮೆಯ ಪುತ್ರಿ, ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರು ಒಡಿಶಾದ ಭುವನೇಶ್ವರದಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ 2026’ರ ಅದ್ದೂರಿ ವೇದಿಕೆಯಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ. ಕಳಿಂಗಾ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯ ಭವ್ಯ ಆವರಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳ ಸುಂದರಿಯರನ್ನು ಹಿಂದಿಕ್ಕಿ ಸಾಧ್ವಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕೇವಲ ಮೂರು ತಿಂಗಳ ಅಲ್ಪಾವಧಿಯ ಸಿದ್ಧತೆಯಲ್ಲಿ ಈ ಪ್ರತಿಷ್ಠಿತ ಮೈಲಿಗಲ್ಲು ತಲುಪಿದ ಮಗಳ ಸಾಧನೆಗೆ ಶಾಸಕ ಸತೀಶ್ ಸೈಲ್ ಭಾವುಕರಾಗಿ ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಸಾಧ್ವಿ ಸೈಲ್ ಅವರ ಈ ಯಶಸ್ಸಿನ ಹಿಂದೆ ಬಲಿಷ್ಠ ಶೈಕ್ಷಣಿಕ ಹಿನ್ನೆಲೆಯಿದೆ. ಕಾರವಾರದ ಸದಾಶಿವಗಡದ ‘ಅಮ್ಮಾ ಸ್ಕೂಲ್’ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, ಬೆಂಗಳೂರಿನಲ್ಲಿ ಪಿಯುಸಿ ಹಾಗೂ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಕಾನಮಿಕ್ಸ್ ಮತ್ತು ಮಾರ್ಕೆಟಿಂಗ್ ಪದವಿ ಪಡೆದಿದ್ದಾರೆ. ಸಾಧ್ವಿ ಗೋವಾದಲ್ಲಿ ಜನಿಸಿದ ಕಾರಣ ನಿಯಮದಂತೆ ಗೋವಾ ರಾಜ್ಯವನ್ನು ಪ್ರತಿನಿಧಿಸಿ ಸ್ಪರ್ಧೆಗಿಳಿದಿದ್ದರೂ, ಅವರ ಬಾಲ್ಯ ಮತ್ತು ಸಂಸ್ಕೃತಿಯ ಬೇರುಗಳು ಕಾರವಾರದ ನೆಲದಲ್ಲಿವೆ. ಕಿಟ್ ಸಂಸ್ಥೆಯ ಸಂಸ್ಥಾಪಕ ಡಾ. ಅಚ್ಯುತ ಸಮಂತಾ ಅವರು ಸಾಧ್ವಿಗೆ ನಗದು ಬಹುಮಾನ ನೀಡಿ ಗೌರವಿಸಿದರೆ, ಹಿಂದಿನ ವಿಜೇತರಾದ ನಿಖಿತಾ ಪೋರ್ವಾಲ್ ಹಾಗೂ ರೇಖಾ ಪಾಂಡೆ ಅವರು ಕಿರೀಟ ತೊಡಿಸಿ ಶುಭ ಹಾರೈಸಿದರು.
ಈ ಐತಿಹಾಸಿಕ ಗೆಲುವಿನೊಂದಿಗೆ ಸಾಧ್ವಿ ಸೈಲ್ ಅವರು 2027 ರಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ನೇರ ಅರ್ಹತೆ ಪಡೆದಿದ್ದಾರೆ. ಕರಾವಳಿಯ ಪ್ರತಿಭೆಯೊಂದು ವಿಶ್ವದ ಅತ್ಯುನ್ನತ ಸೌಂದರ್ಯ ವೇದಿಕೆಯಲ್ಲಿ ದೇಶದ ಧ್ವಜವನ್ನು ಎತ್ತಿ ಹಿಡಿಯಲು ಸಜ್ಜಾಗಿರುವುದು ಕನ್ನಡಿಗರಿಗೆ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅದೇ ಸ್ಪರ್ಧೆಯಲ್ಲಿ ಕರ್ನಾಟಕದ ಖುಷಿ ರಮೇಶ್ ಕಲಕೇರಿ ಟಾಪ್ 15 ಹಂತಕ್ಕೇರಿ ರಾಜ್ಯದ ಕೀರ್ತಿ ಹೆಚ್ಚಿಸಿದ್ದು, ಈಗ ಇಡೀ ನಾಡು ಸಾಧ್ವಿ ಸೈಲ್ ಅವರು ವಿಶ್ವ ಸುಂದರಿ ಪಟ್ಟವನ್ನೂ ಅಲಂಕರಿಸಲಿ ಎಂದು ಆಶಿಸುತ್ತಿದೆ.





















