Home Advertisement
Home ಸುದ್ದಿ ರಾಜ್ಯ ಬಹುಮತ ಸಾಬೀತಿಗೂ ಮೊದಲೇ ಸಂಚಲನ; ಸಿಎಂ ವಿಜಯ್ AIADMK ಬಂಡಾಯ ಶಾಸಕರನ್ನು ಭೇಟಿ ಮಾಡಿದ್ದೇಕೆ?

ಬಹುಮತ ಸಾಬೀತಿಗೂ ಮೊದಲೇ ಸಂಚಲನ; ಸಿಎಂ ವಿಜಯ್ AIADMK ಬಂಡಾಯ ಶಾಸಕರನ್ನು ಭೇಟಿ ಮಾಡಿದ್ದೇಕೆ?

0
58

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇತ್ತೀಚಿನ ಬೆಳವಣಿಗೆಯೊಂದು ಭಾರೀ ಅಚ್ಚರಿ ಮೂಡಿಸಿದೆ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಎಐಎಡಿಎಂಕೆ ಬಂಡಾಯ ನಾಯಕ ಸಿ.ವಿ. ಷಣ್ಮುಗಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಎಐಎಡಿಎಂಕೆ ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಮೂಡಿರುವ ಬೆನ್ನಲ್ಲೇ ಈ ಭೇಟಿ ನಡೆದಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರಕ್ಕೆ ಎಐಎಡಿಎಂಕೆಯ ಒಂದು ದೊಡ್ಡ ಬಣ ಬೆಂಬಲ ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಹಾಗೇ ಸಿ.ವಿ. ಷಣ್ಮುಗಂ ಮತ್ತು ಎಸ್‌ಪಿ ವೇಲುಮಣಿ ನೇತೃತ್ವದ ಬಂಡಾಯ ಬಣವು ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಇಪಿಎಸ್ ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ಬದ್ಧವೈರಿ ಡಿಎಂಕೆ ಜೊತೆ ಕೈಜೋಡಿಸಲು ಸಂಚು ರೂಪಿಸಿದ್ದಾರೆ ಎಂದು ಈ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಏಪ್ರಿಲ್ 23ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 47 ಸ್ಥಾನಗಳನ್ನು ಗೆದ್ದು ಸೋಲನುಭವಿಸಿದ ನಂತರ, ಸುಮಾರು 30 ಶಾಸಕರು ಪಳನಿಸ್ವಾಮಿ ವಿರುದ್ಧ ಬಂಡಾಯವೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಷಣ್ಮುಗಂ ಹೇಳಿಕೆ: “ಪಕ್ಷದ ಮೂಲಭೂತ ತತ್ವಗಳನ್ನು ಗಾಳಿಗೆ ತೂರಿ ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಪಳನಿಸ್ವಾಮಿ ಮುಂದಾಗಿದ್ದರು. ಆದ್ರೆ ನಾವು ಜಯಲಲಿತಾ ‘ಅಮ್ಮ ಆಳ್ವಿಕೆ’ಯನ್ನು ಮರಳಿ ತರಲು ಬಯಸುತ್ತೇವೆ. ಅದಕ್ಕಾಗಿ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸಿಎಂ ವಿಜಯ್‌ಗೆ ಬೆಂಬಲ ಸೂಚಿಸುವ ಪತ್ರವನ್ನೂ ಹಸ್ತಾಂತರಿಸಿದ್ದಾರೆ.

ಅಲ್ಲದೇ.. ಇತ್ತ ಎಐಎಡಿಎಂಕೆ ಕೇಂದ್ರ ಕಚೇರಿಯು ಈ ಎಲ್ಲಾ ಆರೋಪಗಳನ್ನು “ವದಂತಿಗಳು” ಎಂದು ತಳ್ಳಿಹಾಕಿದೆ. ಬಂಡಾಯ ನಾಯಕರು ತಮ್ಮ ಜಿಲ್ಲೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ವಿಫಲರಾಗಿ ಈಗ ಸಚಿವ ಸ್ಥಾನದ ಆಸೆಗಾಗಿ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಎಕ್ಸ್ (X) ಮೂಲಕ ಕುಟುಕಿದೆ. ಮೈತ್ರಿ ನಿರ್ಧಾರಗಳನ್ನು ಕೆಲವು ಶಾಸಕರು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಪಕ್ಷದ ಕಾರ್ಯಕರ್ತರು ಇಪಿಎಸ್ ಪರವಾಗಿದ್ದಾರೆ ಎಂದು ಪಕ್ಷ ಪ್ರತಿಪಾದಿಸಿದೆ.

ಒಟ್ಟಾರೆಯಾಗಿ.. ಈ ಬೆಳವಣಿಗೆಯು ತಮಿಳುನಾಡಿನಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಲಿದೆ.