ದುಬೈ: ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಕಾಕ್ಪಿಟ್ ಘಟನೆಯ ವೇಳೆ ಮಹತ್ವದ ಪಾತ್ರ ವಹಿಸಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಯುಎಇ ಉಪ ಪ್ರಧಾನಿ ಹಾಗೂ ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಅಕ್ಟೋಬರ್ 3ರಂದು ನಡೆದ ಭೇಟಿಯ ವೇಳೆ ಶೇಖ್ ಹಮ್ದಾನ್ ಅವರು ಕ್ಯಾಪ್ಟನ್ ಮಚ್ಚರ್ ಅವರ ಧೈರ್ಯ, ಜವಾಬ್ದಾರಿಯುತ ನಡೆ ಮತ್ತು ಮಾನವ ಜೀವಗಳ ರಕ್ಷಣೆಯ ಮೇಲಿನ ಕಾಳಜಿಯನ್ನು ವಿಶೇಷವಾಗಿ ಶ್ಲಾಘಿಸಿದರು. ಯುಎಇ ನಾಯಕತ್ವದ ಪರವಾಗಿ ಅವರಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಗೌರವವಿದೆ ಎಂದು ಶೇಖ್ ಹಮ್ದಾನ್ ಹೇಳಿದ್ದಾರೆ.
“ಅವರು ನಮ್ಮ ತಂಡದ ಭಾಗವಾಗಿದ್ದಾರೆ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ಅವರು ನಮ್ಮ ರಾಷ್ಟ್ರದ ಕಥೆಯ ಒಂದು ಭಾಗ” ಎಂಬ ಅರ್ಥದಲ್ಲಿ ಶೇಖ್ ಹಮ್ದಾನ್ ಕ್ಯಾಪ್ಟನ್ ಮಚ್ಚರ್ ಅವರನ್ನು ಕೊಂಡಾಡಿದ್ದು, ಯುಎಇ ಪ್ರತಿಪಾದಿಸುವ ಮಾನವೀಯತೆ, ಶಾಂತಿ ಮತ್ತು ಜೀವ ರಕ್ಷಣೆಯ ಮೌಲ್ಯಗಳೊಂದಿಗೆ ಅವರ ನಡೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಕಾಕ್ಪಿಟ್ನಲ್ಲಿ ಗಂಭೀರ ಘಟನೆ ಸಂಭವಿಸಿತ್ತು. ತನಿಖಾ ಮಾಹಿತಿಯ ಪ್ರಕಾರ, ಸಹ ಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸಿದ್ದರಿಂದ ವಿಮಾನ ತೀವ್ರವಾಗಿ ಎತ್ತರ ಕಳೆದುಕೊಂಡಿತ್ತು. ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚರ್ ಕಾಕ್ಪಿಟ್ ಬಾಗಿಲು ತೆರೆಯಲು ಸಾಧ್ಯವಾಗಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಿಸಲು ನೆರವಾದರು.
ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಘಟನೆಯ ಬಳಿಕ ಕ್ಯಾಪ್ಟನ್ ಮಚ್ಚರ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಯುಎಇಗೆ ಸ್ಥಳಾಂತರಿಸಲಾಗಿದ್ದು, ಅವರು ಉತ್ತಮ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರ ತ್ವರಿತ ಪ್ರತಿಕ್ರಿಯೆಯನ್ನೂ ಪ್ರಾಧಿಕಾರ ಶ್ಲಾಘಿಸಿದೆ.
ಇದೇ ಸಂದರ್ಭದಲ್ಲಿ ಘಟನೆಯ ಸಂಪೂರ್ಣ ಹಿನ್ನೆಲೆ ಮತ್ತು ಕಾರಣಗಳ ಕುರಿತು ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಹರಿದಾಡುತ್ತಿರುವ ಊಹಾಪೋಹಗಳು ಅಥವಾ ದೃಢೀಕರಿಸದ ಮಾಹಿತಿಗಳ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈಗಾಗಲೇ ಕ್ಯಾಪ್ಟನ್ ಮಚ್ಚರ್ ಅವರ ಧೈರ್ಯ ಮತ್ತು ತ್ವರಿತ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಯುಎಇ ನಾಯಕತ್ವದಿಂದಲೂ ಅವರಿಗೆ ದೊರೆತಿರುವ ಈ ಗೌರವವು ಘಟನೆಯ ಸಂದರ್ಭದಲ್ಲಿ ಅವರ ಪಾತ್ರದ ಕುರಿತು ವ್ಯಕ್ತವಾಗುತ್ತಿರುವ ಅಂತರರಾಷ್ಟ್ರೀಯ ಮೆಚ್ಚುಗೆಗೆ ಮತ್ತೊಂದು ಸೇರ್ಪಡೆಯಾಗಿದೆ.






















