ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಹಿಳಾ ಪ್ರಯಾಣಿಕರಿದ್ದ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಿ, ಸ್ವತಃ ಮಹಿಳೆಯರಿಗೆ ಟಿಕೆಟ್ ವಿತರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಮುಖ್ಯಮಂತ್ರಿಗೆ ಡೈರಿ ಮಿಲ್ಕ್ ಚಾಕೊಲೇಟ್ಗಳನ್ನು ನೀಡಿದ ದೃಶ್ಯವೂ ಗಮನ ಸೆಳೆದಿದೆ.
ಮುಖ್ಯಮಂತ್ರಿ ವಿಜಯ್ ಅವರು ಇಂದು (ಅಕ್ಟೋಬರ್ 2) ಚೆನ್ನೈನ ಕೊಯಂಬೇಡುವಿನಲ್ಲಿ ‘ವೆಟ್ರಿ ಪಯಾನ್’ ಯೋಜನೆಗೆ ಚಾಲನೆ ನೀಡಿದ್ದು, ಮಹಿಳೆಯರ ಉಚಿತ ಪ್ರಯಾಣ ಯೋಜನೆಯನ್ನು ವಿಸ್ತರಿಸಿದ್ದಾರೆ. ಸರ್ಕಾರಿ ಬಸ್ಸುಗಳನ್ನು ಹತ್ತಿದ ಮುಖ್ಯಮಂತ್ರಿ ವಿಜಯ್, ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿದರು. ನಂತರ, ಮಹಿಳೆಯರು ಮುಖ್ಯಮಂತ್ರಿ ವಿಜಯ್ ಅವರಿಗೆ ಚಾಕೊಲೇಟ್ ನೀಡಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಉದ್ದೇಶದಿಂದ ಸಿಎಂ ವಿಜಯ್ ಈ ಹಿಂದೆ ಕೂಡ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಿದ್ದರು. ಇತ್ತಿಚೆಗೆ 300 ಹೊಸ ಬಸ್ಗಳಿಗೆ ಚಾಲನೆ ನೀಡಿದ ಬಳಿಕ ಅವರು ಹೊಸ ಬಸ್ನಲ್ಲಿ ಪ್ರಯಾಣಿಸಿ ಚಾಲಕರು ಹಾಗೂ ಸಾರಿಗೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದರು ಎಂದು ವರದಿಯಾಗಿತ್ತು.
ಮಹಿಳೆಯರ ಉಚಿತ ಬಸ್ ಪ್ರಯಾಣದ ಘೋಷಣೆ : ಇದರ ನಡುವೆ ತಮಿಳುನಾಡು ಸರ್ಕಾರದ ಮಹಿಳಾ ಪ್ರಯಾಣಿಕರಿಗೆ ಸಂಬಂಧಿಸಿದ ಬಸ್ ಪ್ರಯಾಣ ಯೋಜನೆಯೂ ಗಮನ ಸೆಳೆದಿದೆ. ಆಗಸ್ಟ್ನಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ರಾಜ್ಯ ಸಾರಿಗೆ ಸಂಸ್ಥೆಗಳ ಎಕ್ಸ್ಪ್ರೆಸ್ ಹಾಗೂ ಡಿಲಕ್ಸ್ ಬಸ್ಗಳಿಗೂ ವಿಸ್ತರಿಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದರು. ಈ ಸೌಲಭ್ಯಕ್ಕೆ ಆದಾಯ ಮಿತಿ ಅಥವಾ ಪ್ರಯಾಣಗಳ ಸಂಖ್ಯೆಯ ಮಿತಿ ಇರಬಾರದು ಎಂದು ಅವರು ಹೇಳಿದ್ದರು.
ಇದೀಗ ಮಹಿಳಾ ಬಸ್ನಲ್ಲಿ ಸಿಎಂ ವಿಜಯ್ ಸ್ವತಃ ಟಿಕೆಟ್ ವಿತರಿಸುತ್ತಿರುವ ದೃಶ್ಯಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸಾರಿಗೆ ಮತ್ತು ಮಹಿಳೆಯರ ಪ್ರಯಾಣ ಸೌಲಭ್ಯ ಕುರಿತ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.





















