Home Advertisement
Home ಸುದ್ದಿ ದೇಶ ಆಕ್ರಮಣಕಾರಿ ಬೀದಿ ನಾಯಿಗಳ ದಯಾಮರಣಕ್ಕೆ ಸುಪ್ರೀಂ ಅನುಮತಿ

ಆಕ್ರಮಣಕಾರಿ ಬೀದಿ ನಾಯಿಗಳ ದಯಾಮರಣಕ್ಕೆ ಸುಪ್ರೀಂ ಅನುಮತಿ

0
87

ಬೀದಿ ನಾಯಿಗಳ ನಿಯಂತ್ರಣಕ್ಕೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ನವದೆಹಲಿ: ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಹಾಗೂ ನಾಯಿ ಕಡಿತ ಪ್ರಕರಣಗಳ ಹಿನ್ನೆಲೆ ಮಹತ್ವದ ಆದೇಶ ನೀಡಿದ್ದು, ಕ್ರೋಧೋನ್ಮತ್ತ ಹಾಗೂ ಅಪಾಯಕಾರಿ ಬೀದಿ ನಾಯಿಗಳಿಗೆ ದಯಾಮರಣ (Euthanasia) ನಡೆಸಲು ಅಧಿಕಾರಿಗಳಿಗೆ ಕಾನೂನುಬದ್ಧ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್‌.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ, “ನಾಯಿ ಕಡಿತ ಅಥವಾ ದಾಳಿಯ ಭಯವಿಲ್ಲದೆ ಸುರಕ್ಷಿತವಾಗಿ ಬದುಕುವುದು ನಾಗರಿಕರ ಘನತೆಯ ಜೀವನದ ಹಕ್ಕಿನ ಭಾಗವಾಗಿದೆ” ಎಂದು ಸ್ಪಷ್ಟಪಡಿಸಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಜನರು ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ಘಟನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಬೀದಿ ನಾಯಿಗಳ ಸ್ಥಳಾಂತರ ಹಾಗೂ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಸಂಬಂಧಿಸಿದಂತೆ ಹಿಂದಿನ ನಿರ್ದೇಶನಗಳನ್ನು ಹಿಂಪಡೆಯುವಂತೆ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಾಲಯದ ಆದೇಶದ ಪ್ರಕಾರ, ಪ್ರಾಣಿಗಳ ಜನನ ನಿಯಂತ್ರಣ (Animal Birth Control – ABC) ನಿಯಮಗಳು ಹಾಗೂ ಇತರ ಕಾನೂನುಬದ್ಧ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ, ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ಕ್ರೋಧೋನ್ಮತ್ತ, ಗುಣಪಡಿಸಲಾಗದಷ್ಟು ಅನಾರೋಗ್ಯಕರ ಅಥವಾ ಆಕ್ರಮಣಕಾರಿ ನಾಯಿಗಳಿಗೆ ದಯಾಮರಣ ಸೇರಿದಂತೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬಹುದು.

ಬೀದಿ ನಾಯಿಗಳನ್ನು ನಿಭಾಯಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಹೊರಡಿಸಿದ್ದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (SOP) ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಿಸಿದೆ.

ರಾಜ್ಯಗಳ ವಿರುದ್ಧ ಅಸಮಾಧಾನ : ಹೆಚ್ಚಿನ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ದೀರ್ಘಕಾಲೀನ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಾಣಿಗಳ ಜನನ ನಿಯಂತ್ರಣ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ.

ನವೆಂಬರ್ 7ರಂದು ನೀಡಿದ್ದ ಹಿಂದಿನ ಆದೇಶದಲ್ಲಿ, ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮತ್ತು ರೇಬೀಸ್ ಲಸಿಕೆ ನೀಡಿದ ಬಳಿಕ ಅವುಗಳನ್ನು ನಿರ್ದಿಷ್ಟ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎಂದು ಕೋರ್ಟ್ ಸೂಚಿಸಿತ್ತು. ಜೊತೆಗೆ, ಹಿಡಿದುಕೊಂಡು ಹೋಗಿದ್ದ ನಾಯಿಗಳನ್ನು ಮತ್ತೆ ಅದೇ ಪ್ರದೇಶಕ್ಕೆ ಬಿಡಬಾರದು ಎಂದು ಹೇಳಿತ್ತು.

ಶಾಲೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ರಾಜ್ಯಗಳಿಗೆ ಹೊಸ ನಿರ್ದೇಶನ : ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಮಗ್ರ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಇದೇ ವೇಳೆ, ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ಹಸುಗಳು ಮತ್ತು ಇತರ ಬೀದಿ ಪ್ರಾಣಿಗಳನ್ನು ತೆರವುಗೊಳಿಸುವ ಕ್ರಮಗಳನ್ನು ಕೂಡ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಶೇಷವಾಗಿ ಮಕ್ಕಳಲ್ಲಿ ರೇಬೀಸ್ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಮಾಧ್ಯಮ ವರದಿಗಳನ್ನು ಆಧರಿಸಿ, ಕಳೆದ ವರ್ಷ ಜುಲೈ 28ರಂದು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಈ ಪ್ರಕರಣದ ವಿಚಾರಣೆ ಆರಂಭಿಸಿತ್ತು.