Home Advertisement
Home ಸುದ್ದಿ ದೇಶ 100 ಅಡಿ ಹಾರ.. ಲಕ್ಷ ಲಕ್ಷ ಹಣ; ಮೇವಾತ್ ಮದುವೆಯ ಈ ಅದ್ದೂರಿತನಕ್ಕೆ ಪೊಲೀಸರೇ ಶಾಕ್!

100 ಅಡಿ ಹಾರ.. ಲಕ್ಷ ಲಕ್ಷ ಹಣ; ಮೇವಾತ್ ಮದುವೆಯ ಈ ಅದ್ದೂರಿತನಕ್ಕೆ ಪೊಲೀಸರೇ ಶಾಕ್!

0
85

ರಾಜಸ್ಥಾನದ ದೀಗ್ ಜಿಲ್ಲೆಯಲ್ಲಿ ನಡೆದ ವಿಭಿನ್ನ ವಿವಾಹ ಸಮಾರಂಭವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಈ ಮದುವೆಯ ವಿಶೇಷ ಆಕರ್ಷಣೆ ಎಂದರೆ, ವರ ಧರಿಸಿದ್ದ ಬರೋಬ್ಬರಿ 100 ಅಡಿ ಉದ್ದದ ನೋಟಿನ ಹಾರ!

ಹೌದು, ಕೇಳಲು ಅಚ್ಚರಿಯೆನಿಸಿದರೂ ಇದು ಸತ್ಯ. ದೀಗ್ ಜಿಲ್ಲೆಯ ಜುರಾಹರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಮನ್ವಾಡಿ ಎಂಬ ಗ್ರಾಮದಲ್ಲಿ ಏಪ್ರಿಲ್ 19 ರಂದು ನಡೆದ ಮದುವೆಯಲ್ಲಿ ಈ ದೃಶ್ಯ ಕಂಡುಬಂದಿದೆ. ವೈರಲ್ ಆಗಿರುವ 20 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ವರನು ಈ ಬೃಹತ್ ಹಾರವನ್ನು ಧರಿಸಲು ಏಣಿಯನ್ನು ಹತ್ತುತ್ತಿರುವುದು ಕಂಡುಬರುತ್ತದೆ. 500 ಮತ್ತು 100 ರೂಪಾಯಿ ಮುಖಬೆಲೆಯ ನೋಟುಗಳಿಂದ ತಯಾರಿಸಲಾದ ಈ ಹಾರವು ನೆಲದಿಂದ ಸುಮಾರು 100 ಅಡಿಗಳಷ್ಟು ಎತ್ತರಕ್ಕೆ ಹರಡಿಕೊಂಡಿದ್ದು, ಹಲವು ಜನರು ಅದನ್ನು ಕೆಳಗಿನಿಂದ ಹಿಡಿದು ಸಮತೋಲನಗೊಳಿಸುತ್ತಿರುವುದನ್ನು ನಾವು ನೋಡಬಹುದು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣ್ ಗೋಪಿನಾಥ್ ಕಾಂಬ್ಳೆ ಅವರು, ಮೇಲ್ನೋಟಕ್ಕೆ ಇದರಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ವಾಸ್ತವವಾಗಿ, ಈ ಹಾರವು ಅಸಲಿ ನೋಟುಗಳಿಂದ ಮಾಡಲ್ಪಟ್ಟಿದ್ದರೂ, ಇದನ್ನು ಬಾಡಿಗೆಗೆ ತರಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಹರಿಯಾಣದ ನುಹ್ ಎಂಬಲ್ಲಿ ಇಂತಹ ಬೃಹತ್ ನೋಟಿನ ಹಾರಗಳನ್ನು ಮದುವೆಗಳ ಪ್ರದರ್ಶನಕ್ಕಾಗಿ ಬಾಡಿಗೆಗೆ ನೀಡುವ ಪದ್ಧತಿ ಇದೆ ಎಂದು ತಿಳಿದುಬಂದಿದೆ.

ಗ್ರಾಮದ ಸರಪಂಚ್ ಅಬ್ದುಲ್ ಮಜೀದ್ ಅವರ ಪ್ರಕಾರ, ಮೇವಾತ್ ಪ್ರದೇಶದಲ್ಲಿ ಮದುವೆ ಸಂದರ್ಭದಲ್ಲಿ ಇಂತಹ ದೊಡ್ಡ ಹಾರಗಳನ್ನು ಧರಿಸುವುದು ಒಂದು ಸಂಪ್ರದಾಯವಾಗಿದೆ. ಅಂದು ನಡೆದ ಸಮಾರಂಭದಲ್ಲಿ ರುಕ್ನುದ್ದೀನ್ ಮೇವೋ ಮತ್ತು ಅವರ ಸೋದರಳಿಯ ಅನ್ಸಾರ್ ಮೇವೋ ಎಂಬ ಇಬ್ಬರು ವರಗಳು ಮದುವೆಯ ಸಂಭ್ರಮವನ್ನು ಹೆಚ್ಚಿಸಲು ಇದೇ ಒಂದೇ ಹಾರವನ್ನು ಬಳಸಿ ಮಿಂಚಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಮದುವೆಗೆ ಮಾಡುವ ಈ ಅದ್ದೂರಿ ಖರ್ಚು ಮತ್ತು ವಿಭಿನ್ನ ಶೈಲಿಯ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.