Home Advertisement
Home ಸುದ್ದಿ ದೇಶ ಕೇದಾರನಾಥ ಮಾರ್ಗದಲ್ಲಿ ಭೀಕರ ಭೂಕುಸಿತ: 10,450 ಯಾತ್ರಿಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಸೇನಾ ಪಡೆಗಳು!

ಕೇದಾರನಾಥ ಮಾರ್ಗದಲ್ಲಿ ಭೀಕರ ಭೂಕುಸಿತ: 10,450 ಯಾತ್ರಿಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಸೇನಾ ಪಡೆಗಳು!

0
23

ಉತ್ತರಾಖಂಡದ ರುದ್ರಪ್ರಯಾಗದ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸಿಲುಕಿಕೊಂಡಿದ್ದ 10,450 ಯಾತ್ರಿಕರನ್ನು ಜಂಟಿ ರಕ್ಷಣಾ ಪಡೆಗಳು ಅತ್ಯಂತ ಯಶಸ್ವಿಯಾಗಿ ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸೋನ್‌ಪ್ರಯಾಗ್‌ ಮತ್ತು ಗೌರಿಕುಂಡ ನಡುವಿನ ಮುಖ್ಯ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ಹಠಾತ್ ಭೂಕುಸಿತ ಉಂಟಾಗಿತ್ತು. ನಿರಂತರವಾಗಿ ಉರುಳುತ್ತಿದ್ದ ಬಂಡೆಗಳು, ಕಗ್ಗತ್ತಲು ಮತ್ತು ಭಾರಿ ಮಳೆಯ ಮಧ್ಯೆ ಸಾವಿರಾರು ಯಾತ್ರಿಕರು ಸಿಲುಕಿ ತೀವ್ರ ಆತಂಕಕ್ಕೊಳಗಾಗಿದ್ದರು. ಪರ್ವತ ಪ್ರದೇಶದ ಕಠಿಣ ಪರಿಸ್ಥಿತಿಯು ಯಾತ್ರಿಕರ ಜೀವಕ್ಕೆ ಕಂಟಕ ತಂದೊಡ್ಡಿತ್ತು.

ರಾತ್ರಿ 9:16 ರ ಸುಮಾರಿಗೆ ರುದ್ರಪ್ರಯಾಗ್ ಜಿಲ್ಲಾ ನಿಯಂತ್ರಣ ಕೊಠಡಿಯಿಂದ (DCR) ಬಂದ ತುರ್ತು ಮಾಹಿತಿಯ ಆಧಾರದ ಮೇಲೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (NDRF) ಜಂಟಿಯಾಗಿ ಕಾರ್ಯಾಚರಣೆಗೆ ಇಳಿದವು. ಅತ್ಯಾಧುನಿಕ ಉಪಕರಣಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿದ ಯೋಧರು, ಪ್ರಾಣದ ಹಂಗು ತೊರೆದು ಯಾತ್ರಿಕರಿಗೆ ಧೈರ್ಯ ತುಂಬುತ್ತಾ ಸುರಕ್ಷಿತ ಮಾರ್ಗಗಳ ಮೂಲಕ ಮುನ್ನಡೆಸಿದರು.

ಸತತ ಕಾರ್ಯಾಚರಣೆಯ ನಂತರ ಜೆಸಿಬಿ ಯಂತ್ರಗಳ ಸಹಾಯದಿಂದ ಹೆದ್ದಾರಿಯಲ್ಲಿದ್ದ ಮಣ್ಣು ಮತ್ತು ಬೃಹತ್ ಬಂಡೆಗಳನ್ನು ತೆರವುಗೊಳಿಸಲಾಗಿದ್ದು, ಸದ್ಯ ರಸ್ತೆ ಸಂಚಾರವನ್ನು ಪುನರಾರಂಭಿಸಲಾಗಿದೆ. ಹವಾಮಾನ ವೈಪರೀತ್ಯ ಮುಂದುವರಿದಿರುವುದರಿಂದ ಈ ಮಾರ್ಗದಲ್ಲಿ ಪ್ರಯಾಣಿಸುವ ಯಾತ್ರಿಕರಿಗೆ ‘ಹೈ ಅಲರ್ಟ್’ ಘೋಷಿಸಲಾಗಿದೆ ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಅರ್ಪಣ್‌ ಯಧುವಂಶಿ ಎಚ್ಚರಿಕೆ ನೀಡಿದ್ದಾರೆ.