SK Home Ad
Home ಸುದ್ದಿ ದೇಶ ಅಂಧ ಓದುಗರಿಗೆ ಸಿಹಿಸುದ್ದಿ: ಪಾಕ್ಷಿಕದಿಂದ ವಾರಪತ್ರಿಕೆಯಾದ ‘ದೃಷ್ಟಿ’

ಅಂಧ ಓದುಗರಿಗೆ ಸಿಹಿಸುದ್ದಿ: ಪಾಕ್ಷಿಕದಿಂದ ವಾರಪತ್ರಿಕೆಯಾದ ‘ದೃಷ್ಟಿ’

0
26

ಮುಂಬಯಿ: ಅಂಧತ್ವದ ಸಮಸ್ಯೆ ಇರುವವರಿಗೆ ದೇಶ-ವಿದೇಶಗಳ ವಿದ್ಯಮಾನಗಳು ಹಾಗೂ ಸುದ್ದಿಗಳು ತಕ್ಷಣಕ್ಕೆ ತಲುಪಬೇಕು ಎನ್ನುವ ಉದಾತ್ತ ಉದ್ದೇಶದೊಂದಿಗೆ, ರಿಲಯನ್ಸ್ ಫೌಂಡೇಶನ್ ತನ್ನ ಪ್ರಸಿದ್ಧ ‘ದೃಷ್ಟಿ’ ಬ್ರೈಲ್ ಪತ್ರಿಕೆಯನ್ನು ಇನ್ನು ಮುಂದೆ ವಾರಪತ್ರಿಕೆಯಾಗಿ ಪ್ರಕಟಿಸುವುದಾಗಿ ತಿಳಿಸಿದೆ. ಇದುವರೆಗೆ ಇದು ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿತ್ತು.

ದೇಶದ ಏಕೈಕ ನೋಂದಾಯಿತ ಅಂತಾರಾಷ್ಟ್ರೀಯ ಬ್ರೈಲ್ ಪತ್ರಿಕೆ “ದೃಷ್ಟಿʼ ಆಗಿದ್ದು ಇನ್ಮುಂದೆ ಪ್ರತಿ ವಾರವೂ ಓದುಗರ ಕೈಸೇರಲಿದೆ. ಇದರಿಂದಾಗಿ ಹಿಂದಿ ಹಾಗೂ ಮರಾಠಿ ಭಾಷೆಯ ದೃಷ್ಟಿಹೀನ ಓದುಗರಿಗೆ ತಾಜಾ ಸುದ್ದಿಗಳು, ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರೇರಣಾದಾಯಿ ಕಥೆಗಳು ಇನ್ನಷ್ಟು ಬೇಗ ಮತ್ತು ಸುಲಭವಾಗಿ ತಲುಪಲಿವೆ.

ಜ್ಞಾನದ ಜೊತೆಗೆ ದೃಷ್ಟಿ ಭಾಗ್ಯ: ನ್ಯಾಷನಲ್ ಅಸೋಸಿಯೇಷನ್ ಆಫ್ ದಿ ಬ್ಲೈಂಡ್ (ಎನ್‌ಎಬಿ) ಇಂಡಿಯಾ ಸಹಯೋಗದಲ್ಲಿ 2003 ರಲ್ಲಿ ಆರಂಭವಾದ ‘ರಿಲಯನ್ಸ್ ಫೌಂಡೇಶನ್ ದೃಷ್ಟಿ’ ಕೇವಲ ಪತ್ರಿಕೆ ಪ್ರಕಟಣೆಗಷ್ಟೇ ಸೀಮಿತವಾಗಿಲ್ಲ. ಶಂಕರ ಐ ಫೌಂಡೇಶನ್ ಹಾಗೂ ಅರವಿಂದ್ ಐ ಕೇರ್ ಸಿಸ್ಟಮ್ ಜೊತೆಗೂಡಿ, ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಜನರ ಕಣ್ಣಿನ ಆರೈಕೆಗೆ ಶ್ರಮಿಸುತ್ತಿದೆ. ಅಂಧತ್ವ ತಡೆಗಟ್ಟುವಿಕೆ, ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆಗಳು, ಉಚಿತ ಕನ್ನಡಕ ವಿತರಣೆ ಮತ್ತು ನೇತ್ರದಾನ ಜಾಗೃತಿಯಂತಹ ಕಾರ್ಯಕ್ರಮಗಳ ಮೂಲಕ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ.

ಕಳೆದ ಎರಡು ದಶಕಗಳಲ್ಲಿ ಈ ಕಾರ್ಯಕ್ರಮದ ಮೂಲಕ ಬಡ ಹಾಗೂ ಅಗತ್ಯವಿರುವ 22,500ಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿ, ದೃಷ್ಟಿ ಮರಳಿ ಬರುವಂತಾಗಿದೆ.

ಹೆಚ್ಚಾಗಲಿದೆ ಓದುಗರ ಸಂಖ್ಯೆ: ಸದ್ಯ ‘ದೃಷ್ಟಿ’ ಬ್ರೈಲ್ ಪತ್ರಿಕೆಯು 30,000ಕ್ಕೂ ಹೆಚ್ಚು ಓದುಗರನ್ನು ಹೊಂದಿದೆ. ಈಗ ಪತ್ರಿಕೆಯು ವಾರಪತ್ರಿಕೆಯಾಗಿ ಬದಲಾಗುತ್ತಿರುವುದರಿಂದ, ಈ ಸುದ್ಧಿ ಮಾಹಿತಿ ಜಾಲವು ಇನ್ನಷ್ಟು ವಿಸ್ತರಿಸಲಿದ್ದು, ಲಕ್ಷಾಂತರ ಅಂಧರ ಜೀವನಕ್ಕೆ ಹೊಸ ಬೆಳಕು ನೀಡಲಿದೆ.

5 ಕೋಟಿ ರೂಪಾಯಿಗಳ ನೆರವು: ಇದೇ ವರ್ಷದ ಜನವರಿ (2026) ಯಲ್ಲಿ ನಡೆದ ‘ಎನ್‌ ಎಬಿ ಇಂಡಿಯಾ’ ಸಂಸ್ಥೆಯ 75ನೇ ಸಂಸ್ಥಾಪನಾ ದಿನಾಚರಣೆಯ ಶುಭ ಸಂದರ್ಭದಲ್ಲಿ, ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ ಅವರು ಅಂಧರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿಗಳ ನೆರವಿನ ಭರವಸೆಯನ್ನು ನೀಡಿದ್ದರು. ಈ ಬೆಂಬಲದ ಭಾಗವಾಗಿ ಈಗ ಪತ್ರಿಕೆಯು ವಾರಕ್ಕೊಮ್ಮೆ ಪ್ರಕಟಗೊಳ್ಳುತ್ತಿದ್ದು, ಮಾಹಿತಿ ಪ್ರಸಾರ ಮತ್ತು ಸಮಾನ ಅವಕಾಶಗಳ ಸೃಷ್ಟಿಗೆ ಹೊಸ ಮುನ್ನುಡಿ ಬರೆದಿದೆ.