Home Advertisement
Home ಸುದ್ದಿ ದೇಶ ಸಚಿವರ ಮನೆ ಮೇಲೆ ED ದಾಳಿ: ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

ಸಚಿವರ ಮನೆ ಮೇಲೆ ED ದಾಳಿ: ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

0
81

ಮೋದಿಯನ್ನು ಔರಂಗಜೇಬ್‌ಗೆ ಹೋಲಿಕೆ ಮಾಡಿದ ಕೇಜ್ರಿವಾಲ್‌

ನವದೆಹಲಿ/ಚಂಡೀಗಢ: ಪಂಜಾಬ್ ಸರ್ಕಾರದ ಸಚಿವ ಸಂಜೀವ್ ಅರೋರಾ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ದಾಳಿಯ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್‌ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಂಜಾಬ್‌ನಲ್ಲಿ ರಾಜಕೀಯ ಒತ್ತಡ ತಂತ್ರ ಜಾರಿಯಲ್ಲಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ಬೆಳಿಗ್ಗೆ ಇಡಿ ಅಧಿಕಾರಿಗಳ ತಂಡಗಳು ಚಂಡೀಗಢದಿಂದ ದೆಹಲಿವರೆಗಿನ ಸಂಜೀವ್ ಅರೋರಾ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದವು. ಈ ಕ್ರಮಕ್ಕೆ ಆಮ್ ಆದ್ಮಿ ಪಕ್ಷ (AAP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಪಂಜಾಬ್ ರಾಜಕೀಯವನ್ನು ಅಸ್ಥಿರಗೊಳಿಸುವ ಪ್ರಯತ್ನವೆಂದು ಬಣ್ಣಿಸಿದೆ.

ಕೇಜ್ರಿವಾಲ್ ಆಕ್ರೋಶ : ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ಬಂಗಾಳ ಚುನಾವಣೆ ಮುಗಿದ ತಕ್ಷಣ ಪಂಜಾಬ್‌ನಲ್ಲಿ ಪ್ರತಿದಿನ ಇಡಿ ದಾಳಿಗಳು ಆರಂಭವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಮೋದಿ ಸರ್ಕಾರ ಪಂಜಾಬ್‌ಗೆ ಅನೇಕ ರೀತಿಯಲ್ಲಿ ಹಾನಿ ಮಾಡಿದೆ. ಪಂಜಾಬಿಗಳನ್ನು ಹಲವು ರೀತಿಯಲ್ಲಿ ಕಿರುಕುಳ ನೀಡಲಾಗಿದೆ,” ಎಂದು ಆರೋಪಿಸಿದರು.

ಅವರು ಪಂಜಾಬ್‌ನ ನೀರಿನ ಹಂಚಿಕೆ, ಗ್ರಾಮೀಣಾಭಿವೃದ್ಧಿ ನಿಧಿ ತಡೆ ಹಾಗೂ ಪಂಕಾಬ್‌ ವಿಶ್ವವಿಧ್ಯಾಲಯಗೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.

ಅಶೋಕ್ ಮಿತ್ತಲ್ ಉಲ್ಲೇಖ: ಕೇಜ್ರಿವಾಲ್, ಇತ್ತೀಚೆಗೆ ಎಎಪಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಅಶೋಕ್ ಮಿತ್ತಲ್ ಅವರ ಉದಾಹರಣೆಯನ್ನು ಉಲ್ಲೇಖಿಸಿದರು. “ಅಶೋಕ್ ಮಿತ್ತಲ್ ಮನೆ ಮೇಲೆ ದಾಳಿ ನಡೆಯಿತು. ಮರುದಿನವೇ ಅವರು ಬಿಜೆಪಿಗೆ ಸೇರಿದರು. ಇದರಿಂದ ಇಡಿ ದಾಳಿಯ ಉದ್ದೇಶ ಭ್ರಷ್ಟಾಚಾರ ಪತ್ತೆಹಚ್ಚುವುದು ಅಲ್ಲ; ರಾಜಕೀಯ ಒತ್ತಡ ಹೇರುವುದೇ ಎಂಬುದು ಸ್ಪಷ್ಟವಾಗುತ್ತದೆ,” ಎಂದು ಕೇಜ್ರಿವಾಲ್ ಹೇಳಿದರು.

“ಸಂಜೀವ್ ಅರೋರಾ ಅವರ ಮನೆ ಮೇಲೂ ಹಿಂದೆ ದಾಳಿ ನಡೆದಿದೆ. ಅವರು ಬಿಜೆಪಿಗೆ ಸೇರದಿದ್ದಾಗ ಮತ್ತೆ ದಾಳಿ ನಡೆಸಲಾಗಿದೆ,” ಎಂದು ಆರೋಪಿಸಿದರು.

ಭಗವಂತ್ ಮಾನ್ ಪ್ರತಿಕ್ರಿಯೆ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಹ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಒಂದು ವರ್ಷದಲ್ಲಿ ಇದು ಮೂರನೇ ಬಾರಿ ಸಂಜೀವ್ ಅರೋರಾ ಮನೆಗೆ ಇಡಿ ಬಂದಿದೆ. ಕಳೆದ ತಿಂಗಳಲ್ಲೇ ಇದು ಎರಡನೇ ದಾಳಿ. ಆದರೂ ಇವರಿಗೆ ಏನೂ ಸಿಕ್ಕಿಲ್ಲ,” ಎಂದು ಅವರು ಹೇಳಿದ್ದಾರೆ.

“ಪಂಜಾಬ್ ಗುರುಗಳ ಭೂಮಿ. ಔರಂಗಜೇಬ್ ಕೂಡ ಇದನ್ನು ಒಡೆಯಲು ಸಾಧ್ಯವಾಗಲಿಲ್ಲ. ಇದು Bhagat Singh ಅವರ ನಾಡು. ಮೋದಿ ಸರ್ಕಾರದ ಕಪಟ ರಾಜಕೀಯಕ್ಕೂ ಪಂಜಾಬ್ ಮಣಿಯುವುದಿಲ್ಲ,” ಎಂದು ಹೇಳಿದ್ದಾರೆ.

ಮೋದಿ–ಔರಂಗಜೇಬ್ ಹೋಲಿಕೆ : ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು ಮೊಘಲ್ ದೊರೆ ಔರಂಗಜೇಬ್‌ಗೆ ಹೋಲಿಸಿದ್ದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

“ನೂರಾರು ವರ್ಷಗಳ ಹಿಂದೆ ಔರಂಗಜೇಬ್ ದಬ್ಬಾಳಿಕೆ ಮೂಲಕ ದೇಶದ ಹಲವೆಡೆ ಆಳ್ವಿಕೆ ಸ್ಥಾಪಿಸಿದ್ದ. ಈಗ ಮೋದಿ ಸರ್ಕಾರವೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಆದರೆ ಗುರುಗಳ ತ್ಯಾಗದಿಂದ ಪಂಜಾಬ್ ಔರಂಗಜೇಬನ ವಿರುದ್ಧ ನಿಂತಂತೆ, ಇಂದೂ ಪಂಜಾಬ್ ದಬ್ಬಾಳಿಕೆಯ ವಿರುದ್ಧ ಹೋರಾಡಲಿದೆ,” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಜಕೀಯ ತೀವ್ರತೆ ಹೆಚ್ಚಳ: ಈ ದಾಳಿಗಳು ಪಂಜಾಬ್‌ನಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಎಪಿ ಇದನ್ನು ಬಿಜೆಪಿ ಪ್ರೇರಿತ ಕ್ರಮವೆಂದು ಆರೋಪಿಸುತ್ತಿರುವಾಗ, ಇಡಿ ಇದುವರೆಗೆ ಅಧಿಕೃತವಾಗಿ ಯಾವುದೇ ವಿವರ ಬಹಿರಂಗಪಡಿಸಿಲ್ಲ.

ಪಂಜಾಬ್‌ನಲ್ಲಿ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಕಾವು ಹೆಚ್ಚಿಸುವ ಸಾಧ್ಯತೆ ಇದೆ.