Home Advertisement
Home ಸುದ್ದಿ ದೇಶ DRDOಗೆ ಮತ್ತೊಂದು ಮೈಲುಗಲ್ಲು: TARA ಶಸ್ತ್ರಾಸ್ತ್ರ ಪರೀಕ್ಷೆ ಯಶಸ್ವಿ

DRDOಗೆ ಮತ್ತೊಂದು ಮೈಲುಗಲ್ಲು: TARA ಶಸ್ತ್ರಾಸ್ತ್ರ ಪರೀಕ್ಷೆ ಯಶಸ್ವಿ

0
63

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಹತ್ವದ ಸಾಧನೆಯಾಗಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ವಾಯುಪಡೆ (IAF) ಸಂಯುಕ್ತವಾಗಿ ಅಭಿವೃದ್ಧಿಪಡಿಸಿರುವ ಟ್ಯಾಕ್ಟಿಕಲ್ ಅಡ್ವಾನ್ಸ್‌ಡ್ ರೇಂಜ್ ಆಗ್ಮೆಂಟೇಶನ್ (TARA) ಶಸ್ತ್ರಾಸ್ತ್ರ ವ್ಯವಸ್ಥೆಯ ಮೊದಲ ಹಾರಾಟ-ಪ್ರಯೋಗ ಯಶಸ್ವಿಯಾಗಿದೆ.

ಮೇ 07, 2026 ರಂದು ಒಡಿಶಾದ ಕರಾವಳಿಯಲ್ಲಿ ಈ ಮಹತ್ವದ ಪರೀಕ್ಷೆ ನಡೆಸಲಾಯಿತು. TARA ಎಂಬುದು ಮಾಡ್ಯುಲರ್ ರೇಂಜ್ ಎಕ್ಸ್‌ಟೆನ್ಶನ್ ಕಿಟ್ ಆಗಿದ್ದು, ಮಾರ್ಗದರ್ಶನವಿಲ್ಲದ ಸಾಮಾನ್ಯ ಸಿಡಿತಲೆಗಳನ್ನು ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವ ಭಾರತದ ಮೊದಲ ಸ್ವದೇಶಿ ಗ್ಲೈಡ್ ಆಯುಧ ವ್ಯವಸ್ಥೆಯಾಗಿದೆ.

ಈ ವ್ಯವಸ್ಥೆಯನ್ನು ಹೈದರಾಬಾದ್‌ನ ಸಂಶೋಧನಾ ಕೇಂದ್ರ ಇಮಾರತ್ (RCI) ಸೇರಿದಂತೆ DRDOನ ವಿವಿಧ ಪ್ರಯೋಗಾಲಯಗಳು ಅಭಿವೃದ್ಧಿಪಡಿಸಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ನಿಖರತೆ ಮತ್ತು ಹೆಚ್ಚಿನ ಮಾರಕತೆ ಒದಗಿಸುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.

TARA ವ್ಯವಸ್ಥೆಯ ಪ್ರಮುಖ ವಿಶೇಷತೆ ಎಂದರೆ, ಇದು ನೆಲದ ಗುರಿಗಳನ್ನು ದೂರದಿಂದಲೇ ಅತ್ಯಂತ ನಿಖರವಾಗಿ ಹೊಡೆಯುವ ಸಾಮರ್ಥ್ಯ ಹೊಂದಿದೆ. ಮಾರ್ಗದರ್ಶನವಿಲ್ಲದ ಬಾಂಬ್‌ಗಳನ್ನು ಸ್ಮಾರ್ಟ್ ಆಯುಧಗಳನ್ನಾಗಿ ಪರಿವರ್ತಿಸುವ ಮೂಲಕ ಭಾರತೀಯ ಸೇನೆಯ ದಾಳಿ ಸಾಮರ್ಥ್ಯವನ್ನು ಬಹಳ ಮಟ್ಟಿಗೆ ಹೆಚ್ಚಿಸುತ್ತದೆ.

ಡಿಆರ್‌ಡಿಒ ಮಾಹಿತಿ ಪ್ರಕಾರ, ಈ ಯೋಜನೆಯನ್ನು ಅಭಿವೃದ್ಧಿ ಮತ್ತು ಉತ್ಪಾದನಾ ಪಾಲುದಾರರು (DcPP) ಹಾಗೂ ಹಲವು ಭಾರತೀಯ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಉತ್ಪಾದನಾ ಚಟುವಟಿಕೆಗಳನ್ನೂ ಪ್ರಾರಂಭಿಸಲಾಗಿದೆ. ಇದರಿಂದ ‘ಮೇಕ್ ಇನ್ ಇಂಡಿಯಾ’ ಮತ್ತು ಆತ್ಮನಿರ್ಭರ ಭಾರತದ ಗುರಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ರಾಜನಾಥ್‌ ಸಿಂಗ್‌, DRDO, ಭಾರತೀಯ ವಾಯುಪಡೆ ಹಾಗೂ ಕೈಗಾರಿಕಾ ಪಾಲುದಾರರನ್ನು ಅಭಿನಂದಿಸಿದ್ದಾರೆ. ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯ ವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ DRDO ಅಧ್ಯಕ್ಷ ಸಮೀರ್ ವಿ. ಕಾಮತ್ ಯಶಸ್ವಿ ಹಾರಾಟ ಪರೀಕ್ಷೆಯಲ್ಲಿ ಭಾಗವಹಿಸಿದ ವಿಜ್ಞಾನಿಗಳು ಮತ್ತು ತಾಂತ್ರಿಕ ತಂಡಗಳನ್ನು ಶ್ಲಾಘಿಸಿದ್ದಾರೆ.

ಭಾರತ ಈಗಾಗಲೇ ಕ್ಷಿಪಣಿ, ರಾಡಾರ್, ಡ್ರೋನ್ ಮತ್ತು ಯುದ್ಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ವದೇಶಿ ಸಾಧನೆಗಳ ಮೂಲಕ ಜಾಗತಿಕ ಗಮನ ಸೆಳೆದಿದೆ. ಇದೀಗ TARA ವ್ಯವಸ್ಥೆಯ ಯಶಸ್ಸು ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವಾಗಿ ಪರಿಗಣಿಸಲಾಗುತ್ತಿದೆ.