ರಕ್ಕಸಪುರದೋಳ್ ಹಾಡಿಗೆ ಜೋಗಿ ಪ್ರೇಮ್ ಧ್ವನಿ

0
2

ಸಿದ್ದಯ್ಯ ಸ್ವಾಮಿ ಹಾಡಿನಲ್ಲಿ ಅರ್ಜುನ್ ಜನ್ಯ ದರ್ಶನ

ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ರಕ್ಕಸಪುರದೋಳ್’ ಚಿತ್ರ ಬಿಡುಗಡೆಯ ಸನ್ನಾಹದಲ್ಲಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಇತ್ತೀಚೆಗೆ ಬಿಡುಗಡೆಯಾದ ‘ನೀನಾ ನೀನಾ… ನೀನೇನಾ…’ ಎಂಬ ಮೆಲೋಡಿ ಹಾಡು ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದ್ದು, ಅದರ ಬೆನ್ನಲ್ಲೇ ಚಿತ್ರತಂಡ ಇದೀಗ ಮತ್ತೊಂದು ಹಾಡಿನ ಬಿಡುಗಡೆಗೆ ಸಜ್ಜಾಗಿದೆ.

ಜನವರಿ 23ರಂದು ಸಂಜೆ 5.06ಕ್ಕೆ ಪ್ರತಿಷ್ಠಿತ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ‘ಸಿದ್ದಯ್ಯ ಸ್ವಾಮಿ ಬನ್ನಿ…’ ಎಂಬ ಹೊಸ ಹಾಡು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ:  ‘ಅಶೋಕ’ನ ಜನಪದ ಸೊಗಡು: ಟ್ರೆಂಡಿಂಗ್‌ನಲ್ಲಿ ‘ಕಲ್ಯಾಣವೇ’ ಹಾಡು

ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ, ಖ್ಯಾತ ನಿರ್ದೇಶಕ ಹಾಗೂ ಗಾಯಕ ಜೋಗಿ ಪ್ರೇಮ್ ತಮ್ಮ ಧ್ವನಿಯನ್ನು ನೀಡಿದ್ದಾರೆ. ಸಾಹಿತ್ಯಕಾರ ಕ್ರಾಂತಿ ಕುಮಾರ್ ಈ ಹಾಡಿಗೆ ಅರ್ಥಪೂರ್ಣ ಪದಗಳನ್ನು ಒದಗಿಸಿದ್ದಾರೆ. ವಿಶೇಷ ಅಂದರೆ, ಈ ಹಾಡಿನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಹಾಡಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಹಾಡಿನ ಸಂದರ್ಭವನ್ನು ವಿವರಿಸಿರುವ ನಿರ್ದೇಶಕ ರವಿ ಸಾರಂಗ, “ಊರಿನ ಜನರು ತಮ್ಮ ಕಷ್ಟ-ದುಃಖಗಳಿಂದ ವಿಮುಕ್ತಿ ಪಡೆಯಲು ಸಿದ್ದಯ್ಯ ಸ್ವಾಮಿಯ ಮೊರೆ ಹೋಗುವ ಸಂದರ್ಭದಲ್ಲೇ ಈ ಹಾಡು ಮೂಡಿಬರುತ್ತದೆ” ಎಂದು ಹೇಳಿದ್ದಾರೆ. ಹಾಡಿನ ದೃಶ್ಯಗಳಲ್ಲಿ ರಾಜ್ ಬಿ ಶೆಟ್ಟಿ, ಗೌರವ್ ಶೆಟ್ಟಿ ಹಾಗೂ ಊರಿನ ಜನರ ಪಾತ್ರಗಳು ಪ್ರಮುಖವಾಗಿ ಕಾಣಿಸಿಕೊಳ್ಳಲಿವೆ.

ಇದನ್ನೂ ಓದಿ:  ನಟ ಕೋಮಲ್‌ ಈಗ ʼತೆನಾಲಿ DA LLBʼ : ಹೊಸ ಅವತಾರಕ್ಕೆ ಸಜ್ಜು

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಜೋಗಿ ಪ್ರೇಮ್ ಅವರೊಂದಿಗೆ ಕಾರ್ಯನಿರ್ವಹಿಸಿರುವ ರವಿ ಸಾರಂಗ, ‘ರಕ್ಕಸಪುರದೋಳ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಫೆಬ್ರವರಿ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದಾಗಿದೆ.

ಕ್ರೈಂ–ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ, ಕೊಳ್ಳೇಗಾಲದ ಸುತ್ತಮುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ. ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ರವಿ ಸಾರಂಗ,

ಇದನ್ನೂ ಓದಿ:  Movie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ

“ಇದು ಎಲ್ಲರೊಳಗಿರುವ ರಾಕ್ಷಸರ ಕುರಿತಾದ ಕಥೆ. ಮನುಷ್ಯನಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎಂಬ ಎರಡು ಗುಣಗಳಿರುತ್ತವೆ. ಆ ಕೆಟ್ಟ ಗುಣವನ್ನೇ ‘ರಕ್ಕಸ’ ಎಂದು ಕರೆಯಬಹುದು. ಆ ರಕ್ಕಸವನ್ನು ನಾಯಕ ಹೇಗೆ ಮೀರುತ್ತಾನೆ ಎಂಬುದೇ ಚಿತ್ರದ ಹೃದಯ”
ಎಂದು ವಿವರಿಸಿದ್ದಾರೆ.

ಕೆ.ಎನ್. ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ, ಖ್ಯಾತ ಸಾಹಸ ನಿರ್ದೇಶಕ ಕೆ. ರವಿವರ್ಮ ಬಂಡವಾಳ ಹೂಡಿದ್ದಾರೆ. ರಾಜ್ ಬಿ ಶೆಟ್ಟಿ ಜೋಡಿಯಾಗಿ ಸ್ವಾತಿಷ್ಟ ಕೃಷ್ಣ ಹಾಗೂ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬಿ. ಸುರೇಶ್, ಅನಿರುದ್ಧ ಭಟ್, ಗೋಪಾಲ್ ದೇಶಪಾಂಡೆ, ಜಹಾಂಗೀರ್, ಗೌರವ್ ಶೆಟ್ಟಿ, ಸಿದ್ದಣ್ಣ ಸೇರಿದಂತೆ ಹಲವು ಅನುಭವೀ ಕಲಾವಿದರು ತಾರಾಗಣದಲ್ಲಿ ಇದ್ದಾರೆ.

ಇದನ್ನೂ ಓದಿ: AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಹಾಗೂ ಕ್ರಾಂತಿ ಕುಮಾರ್ ಸಂಭಾಷಣೆ ಒದಗಿಸಿದ್ದಾರೆ. ಒಟ್ಟಿನಲ್ಲಿ, ಹಾಡುಗಳು, ಕಥಾವಸ್ತು ಮತ್ತು ರಾಜ್ ಬಿ ಶೆಟ್ಟಿ ಅವರ ಅಭಿನಯದ ಮೇಲೆ ನಿರೀಕ್ಷೆ ಹೆಚ್ಚಿಸಿರುವ ‘ರಕ್ಕಸಪುರದೋಳ್’, ಫೆಬ್ರವರಿ 6ರಂದು ಸಿನಿರಂಗಣದಲ್ಲಿ ಏನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous articleಅಂಕಣ ಬರಹ: ಗ್ರಾಮ ಸ್ವರಾಜ್ – ಪಂಚಾಯತರಾಜ್ ಕತ್ತಿಗೆ ಕೈ