ಬೆಂಗಳೂರು/ಹೈದರಾಬಾದ್: ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ನಿರೀಕ್ಷೆಗೂ ಮೀರಿದ ಬಾಕ್ಸ್ ಆಫೀಸ್ ಯಶಸ್ಸು ಕಂಡಿರುವ ‘ಹನುಮಾನ್ ಅಂಶ್’ ಇದೀಗ ತೆಲುಗು ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ಚಿತ್ರದ ತೆಲುಗು ಆವೃತ್ತಿಯನ್ನು ಅಕ್ಟೋಬರ್ 9, 2026ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ಸಂಸ್ಥೆ, ಚಿತ್ರದ ಆಧ್ಯಾತ್ಮಿಕ ಕಥಾನಕವನ್ನು ದೊಡ್ಡ ಪರದೆಯಲ್ಲಿ ಅನುಭವಿಸುವಂತೆ ಪ್ರೇಕ್ಷಕರಿಗೆ ಆಹ್ವಾನಿಸಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣದಿಂದ ಪ್ರೇರಣೆ ಪಡೆದಿದೆ. ಶೋಭಿನವ್ ಸತ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಚಂದನ್ ಕೆ. ಆನಂದ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವು ಭಾರತದಲ್ಲಿ ಆಗಸ್ಟ್ 7ರಂದು ಆರಂಭದಲ್ಲಿ ಸೀಮಿತ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಆರಂಭಿಕ ಗಳಿಕೆ ದೊಡ್ಡ ಮಟ್ಟದಲ್ಲಿರದಿದ್ದರೂ, ಮೌತ್-ಪಬ್ಲಿಸಿಟಿ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಮೂರನೇ ವಾರದಿಂದ ಚಿತ್ರದ ಗಳಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರವು ಭಾರತದಲ್ಲಿ ₹300 ಕೋಟಿಗೂ ಹೆಚ್ಚು ನೆಟ್ ಗಳಿಕೆ ದಾಖಲಿಸಿದ್ದು, ವಿಶ್ವದಾದ್ಯಂತ ₹400 ಕೋಟಿ ಗಡಿ ದಾಟಿದೆ ಎಂದು ವರದಿಗಳು ತಿಳಿಸಿವೆ.

ತೆಲುಗು ಆವೃತ್ತಿಯ ಬಿಡುಗಡೆ ಆರಂಭದಲ್ಲಿ ಸೆಪ್ಟೆಂಬರ್ 18ಕ್ಕೆ ನಿಗದಿಯಾಗಿತ್ತು. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಬ್ಯಾನರ್ ಮೂಲಕ ಚಿತ್ರವನ್ನು ತೆಲುಗಿನಲ್ಲಿ ಪ್ರಸ್ತುತಪಡಿಸುವ ಯೋಜನೆಯೂ ಇತ್ತು. ಆದರೆ ಬಿಡುಗಡೆಗೆ ಕೆಲವೇ ದಿನಗಳ ಮೊದಲು ಆ ಒಪ್ಪಂದದಿಂದ ತ್ರಿವಿಕ್ರಮ್ ಹೊರಬಂದ ಹಿನ್ನೆಲೆಯಲ್ಲಿ ತೆಲುಗು ಬಿಡುಗಡೆ ಅನಿಶ್ಚಿತವಾಗಿತ್ತು.
ಈ ಬೆಳವಣಿಗೆಯ ನಂತರ ಹೊಂಬಾಳೆ ಫಿಲ್ಮ್ಸ್ ಚಿತ್ರದ ದಕ್ಷಿಣ ಭಾರತದ ಥಿಯೇಟ್ರಿಕಲ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಇದೀಗ ಸಂಸ್ಥೆಯೇ ಅಕ್ಟೋಬರ್ 9ರ ತೆಲುಗು ವಿಶ್ವವ್ಯಾಪಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
ಈಗಾಗಲೇ ಹಿಂದಿ ಆವೃತ್ತಿಗೆ ದೊರೆತಿರುವ ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ₹400 ಕೋಟಿಗೂ ಅಧಿಕ ಜಾಗತಿಕ ಗಳಿಕೆಯ ಹಿನ್ನೆಲೆಯಲ್ಲಿ ತೆಲುಗು ಆವೃತ್ತಿಯ ಮೇಲೂ ಕುತೂಹಲ ಹೆಚ್ಚಾಗಿದೆ.
ವಿಶೇಷವಾಗಿ ಆಧ್ಯಾತ್ಮಿಕ ಕಥಾನಕ ಮತ್ತು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿರುವುದರಿಂದ ಚಿತ್ರಕ್ಕೆ ವಿಭಿನ್ನ ಪ್ರೇಕ್ಷಕ ವರ್ಗ ಸಿಗುವ ನಿರೀಕ್ಷೆಯಿದೆ.
ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಚಿತ್ರದ ಅಂತರರಾಷ್ಟ್ರೀಯ ವಿತರಣೆಯಲ್ಲೂ ತೊಡಗಿಸಿಕೊಂಡಿದ್ದು, ಸೆಪ್ಟೆಂಬರ್ 11ರಿಂದ ವಿದೇಶಿ ಮಾರುಕಟ್ಟೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಿತ್ತು. ಇದೀಗ ತೆಲುಗು ಆವೃತ್ತಿಯ ಮೂಲಕ ದಕ್ಷಿಣ ಭಾರತದ ಪ್ರೇಕ್ಷಕರಿಗೂ ‘ಹನುಮಾನ್ ಅಂಶ್’ ತಲುಪಲಿದೆ.






















